ಮೈಸೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಆ್ಯಂಬುಲೆನ್ಸ್ ಗೆ ಗುದ್ದಿದ ಪರಿಣಾಮ ಆ್ಯಂಬುಲೆನ್ಸ್ ಉರುಳಿ ಬಿದ್ದು ಅದರಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಸರಸ್ವತಿಪುರಂ ಬೇಕ್ ಪಾಯಿಂಟ್ ಬಳಿ ಬರುತ್ತಿರುವಾಗ 14ನೇ ಮುಖ್ಯರಸ್ತೆಯಿಂದ ಬರುತ್ತಿದ್ದ ಬಸ್ಸು, ಜೋಡಿ ರಸ್ತೆಯಿಂದ ಬರುತ್ತಿದ್ದ ಆ್ಯಂಬುಲೆನ್ಸ್ ಗೆ ಗುದ್ದಿದೆ. ಗಾಯಗೊಂಡವರನ್ನು ಜಯಲಕ್ಷ್ಮಿಪುರಂ ನಿವಾಸಿ ಮನೋಹರ್, ಅವರ ಸಹೋದರ ಗಿರೀಶ್, ವಾಹನ ಚಾಲಕ ವಿನಯ್ ಹಾಗೂ ಬೃಂದಾವನ ಸಿಬ್ಬಂದಿ ಎಂದು ತಿಳಿದು ಬಂದಿದೆ. ಆ್ಯಂಬುಲೆನ್ಸ್ ಬೃಂದಾವನ ಆಸ್ಪತ್ರೆಗೆ ಸೇರಿದ್ದು, ಮನೋಹರ್ ಅವರನ್ನು ಹೆಚ್ಚಿನ ತಪಾಸಣೆಗಾಗಿ ಅಪೋಲೋ ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ಸಂಭವಿಸಿದೆ. ಆ್ಯಂಬುಲೆನ್ಸ್ ಉರುಳಿ ಬಿದ್ದಿದ್ದು, ಸ್ಥಳೀಯರು ಗಾಯಾಳುಗಳನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುವೆಂಪುನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆ.ಆರ್.ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಬಸ್ಸು ಚಾಲಕ ಮತ್ತು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.