ಮೈಸೂರು: ಎರಡು ಉಪಚುನಾವಣೆಗಳು ಟ್ರೇಲರ್, ಸಿನಿಮಾ ಇನ್ನು ಬಾಕಿ ಇದೆ. ಸಿದ್ದರಾಮಯ್ಯ ಸರ್ಕಾರದ ಕೊನೆಯ ದಿನಗಳು ಶುರುವಾಗಿದೆ. ಮುಂದೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೆ ನಮ್ಮ ಗುರಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎರಡು ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ. ಇದು ಟ್ರೇಲರ್ ಅಷ್ಟೆ. ಸಿನಿಮಾ ಬಾಕಿ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ ಎಂದು ಹೇಳಿದ ಮುರುಳಿಧರ್ ರಾವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗಳನ್ನು ಚುನಾವಣೆ ಹತ್ತಿರ ಬರುತ್ತಿದಂತೆ ಹಿಂದುಳಿದ ವರ್ಗದವರಿಗೆ ಶೇ 72 ರಷ್ಟು ಮೀಸಲಾತಿ ನೀಡುತ್ತೇನೆ ಎಂದು ಚುನಾವಣಾ ಗಿಮಿಕ್ಸ್ ಮಾಡುತ್ತಿದ್ದು ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳನ್ನ ಮಾಡಿರುವ ಸಚಿವರೇ ತುಂಬಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಸಾಧನೆಯ ವರದಿ ರಾಜ್ಯವಷ್ಟೇ ಅಲ್ಲ ದೇಶದಲ್ಲೂ ಅತ್ಯದ್ಭುತವಾಗಿದೆ. ದೇಶಾದ್ಯಂತ ದಲಿತರು, ಹಿಂದುಳಿದ ಜನರು ಮೋದಿಯವರ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಇದಕ್ಕೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ದೊರೆತ ಗೆಲುವೇ ಉತ್ತಮ ಉದಾಹರಣೆಯಾಗಿದೆ ಎಂದರು.
ಜನರು ಮೋದಿಯವರ ಕಾರ್ಯವೈಖರಿಗೆ ಜೈಕಾರ ಹಾಕುತ್ತಿದ್ದಾರೆ. ಕೇಂದ್ರ ನೀಡುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ವಿಫಲಾವಾಗಿದೆ. ಕಾಂಗ್ರೆಸ್ ನಲ್ಲಿ ಅಧಿಕಾರದಲ್ಲಿರುವ ನಾಯಕರ ಈ ರೀತಿಯ ದುರಾಡಳಿತವನ್ನು ನೋಡಿಯೇ ಕಾಂಗ್ರೆಸ್ ಹಿರಿಯ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಪಕ್ಷದಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಷದ ಹಿರಿಯ ರಾಜಕಾರಣಿ ಅಂತಲೂ ನೋಡದೇ ಕಡೆಗಣಿಸಿದರು.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊನೆಯ ಚುನಾವಣೆಯಾಗಿದೆ. ಇನ್ನು ಮುಂದೆ ಯಾವತ್ತೂ ಅವರು ಅಧಿಕಾರಕ್ಕೆ ಬರಲಾರರು. ಜನತೆ ಅವರ ಆಡಳಿತದಿಂದ ಬೇಸತ್ತು ಹೋಗಿದ್ದಾರೆ ಎಂದು ಅವರು ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಯೇ ಜಯಭೇರಿ ಬಾರಿಸಲಿದ್ದು, ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳಲಿದೆ ಎಂದರು.