ಮೈಸೂರು: ಆನೆಯ ಸೊಂಡಲಿಗಿಂತ ದಂತವೇ ಉದ್ದವಾಗಿ ಬೆಳದು ಸೊಂಡಿಲು ದಂತದೊಳಗೆ ಸಿಕ್ಕಿಹಾಕಿಕೊಂಡು ಆಹಾರ ತಿನ್ನಲು ಕಷ್ಟ ಪಡುತ್ತಿರುವ ಆನೆಯೊಂದು ಕಬಿನಿ ಹಿನ್ನಿರಿನ ಭಳ್ಳೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರಿಗೆ ಕಾಣಿಸಿಕೊಂಡಿದೆ.
ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನಿರಿನ ಅಂತರಸಂತೆ ವಲಯದ ಭಳ್ಳೆ ಪ್ರದೇಶದಲ್ಲಿ ಬೋಗೇಶ್ವರಿ ಗಂಡು ಆನೆ(55) ಎಂದು ಪ್ರಖ್ಯಾತವಾಗಿರುವ ಈ ಆನೆಯ ದಂತ ತನ್ನ ಸೊಂಡಲಿಗಿಂತಲೂ ಉದ್ದವಾಗಿ ಬೆಳೆದು ಸೊಂಡಿಲು ದಂತದೊಳಗೆ ಸಿಕ್ಕಿಹಾಕಿಕೊಂಡು ನೆಲದಲ್ಲಿರುವ ಹಸಿರು ಹುಲ್ಲುಗಳನ್ನ ಮಾತ್ರ ತಿನ್ನಲು ಸಾಧ್ಯವಾಗುತ್ತಿದ್ದು ಮರದ ಮೇಲಿನ ಸೊಪ್ಪು, ಬಿದಿರು ತಿನ್ನಲು ಆಗದೆ ಪ್ರತಿದಿನವೂ ಸರಿಯಾದ ಆಹಾರ ತಿನ್ನದೆ ಸೊರಗುತ್ತಿದೆ.
ಭೋಗೇಶ್ವರಿ ಹೆಸರು ಬಂದಿದ್ದೇಗೆ?
ಕಬಿನಿ ಹಿನ್ನಿರಿನ ಅಂತರಸಂತೆ ಅರಣ್ಯವಲಯದ ಭಳ್ಳೆ ಕಾಡಿನ ಮದ್ಯ ಹಾಡಿ ಜನರು ಪೂಜೆಗೆಂದು ಭೋಗೇಶ್ವರಿ ಗುಡಿಯನ್ನ ಕಟ್ಟಿದ್ದಾರೆ. ಆ ಗುಡಿಯ ಪಕ್ಕದಲ್ಲೇ ಪ್ರತಿದಿನವೂ ಮಲಗುತ್ತಿದ್ದ ಈ ಆನೆ ಯಾವುದೇ ಜನರಿಗೆ ತೊಂದರೆ ಮಾಡುವುದಿಲ್ಲ. ಈ ಆನೆಯ ಜೊತೆ 5 ಆನೆಗಳು ಗುಡಿಯ ಪಕ್ಕದಲ್ಲೇ ಮಲಗುತ್ತವೆ. ಅದರಲ್ಲಿ ಹಿರಿವನಾದ ಈ ಗಂಡು ಆನೆಗೆ ಭೋಗೇಶ್ವರಿ ಗಂಡು ಎಂದು ಹಾಡಿಯ ಜನ ನಾಮಕರಣ ಮಾಡಿದ್ದು ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಇದೇ ರೀತಿಯ ದಂತ ಬೆಳೆಯುತ್ತಿದ್ದು, ಆಹಾರ ತಿನ್ನಲು ಕಷ್ಟ ವಾಗುತ್ತಿದ್ದರೂ ಆನೆ ಮಾತ್ರ ಸಾವ್ನಪ್ಪದೆ ಪ್ರತಿದಿನವೂ ಲವಲವಿಕೆಯಿಂದಲೇ ಇರುವುದನ್ನ ನೋಡಿದರೆ ಈ ಆನೆಗೆ ಭೋಗೇಶ್ವರ ಕೃಪೆ ಇದೆ ಎನ್ನುತ್ತಾರೆ ಹಾಡಿ ಜನರು.
ವೈದ್ಯರು ಹೇಳಿದ್ದೇನು?
ಉದ್ದದ ದಂತದಿಂದ ಆಹಾರ ಸೇವಿಸಲು ಕಷ್ಟ ಪಡುತ್ತಿರುವ ಭೋಗೇಶ್ವರಿ ಗಂಡು ಆನೆಗೆ ಅರವಳಿಕೆ ಮದ್ದು ನೀಡಿ ದಂತದ ಮುಂಭಾಗವನ್ನ ಕಟ್ ಮಾಡಲು ಅರಣ್ಯ ಇಲಾಖೆಯ ಅನುಮತಿ ಪಡೆದು ಸರಿಪಡಿಸಬಹುದು. ಆದರೆ 55 ವರ್ಷದ ಈ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಿದರೆ ಅದನ್ನ ತಡೆಯುವ ಶಕ್ತಿ ಇದೇಯಾ ಎಂಬುದನ್ನ ಪರೀಕ್ಷಿಸಿ ನಂತರ ನೀಡಬಹುದು ಎನ್ನುತ್ತಾರೆ. ವೈದ್ಯಾಧಿಕಾರಿ ನಾಗರಾಜು.