ಮೈಸೂರು: ಯುಗಾದಿ ಹಬ್ಬವನ್ನು ಶಾಂತಿ, ಸೌಹಾರ್ದತೆಯೊಂದಿಗೆ ಸಡಗರ, ಸಂಭ್ರಮದೊಂದಿಗೆ ಆಚರಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮೈಸೂರು ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಹಬ್ಬದ ಹೆಸರಿನಲ್ಲಿ ಪುಂಡಾಟಿಕೆ, ಅಕ್ರಮ ಚಟುವಟಿಕೆಗಳಿಗೆ ಮುಂದಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಸೂಚನೆಗಳೇನು?
ಹಬ್ಬದ ದಿನ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ/ಇಸ್ಪೀಟ್ ಆಟ ಆಡುವುದನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು ಹೆಂಗಸರನ್ನು ಚುಡಾಯಿಸಬಾರದು ಮತ್ತು ಮದ್ಯಪಾನ ಮಾಡಿ ಅವಿಧೇಯತೆಯಿಂದ ವರ್ತಿಸಬಾರದು. ಹೆಂಗಸರು ಮತ್ತು ಹೆಣ್ಣು ಮಕ್ಕಳು ಆಭರಣ, ಒಡವೆಗಳನ್ನು ಸಾರ್ವಜನಿಕರಿಗೆ ಪ್ರದರ್ಶನವಾಗದಂತೆ ಸುರಕ್ಷಿತವಾಗಿ ಧರಿಸುವುದು. ಸಾಂಸ್ಕೃತಿಕ ಕಾರ್ಯಕ್ರಮದ ಸ್ಥಳದಲ್ಲಿ ವಿದ್ಯುಚ್ಚಕ್ತಿ ಅಳವಡಿಸುವ ಬಗ್ಗೆ ಚೆಸ್ಕಾಂ ನಿಂದ ಅನುಮತಿ ಪಡೆದಿರಬೇಕು ಹಾಗೂ ಯಾವುದೇ ಕಾರಣಕ್ಕೂ ಅನಧಿಕೃತವಾಗಿ ನೇರವಾಗಿ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ಪಡೆಯಬಾರದು. ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆಗಳು ನಡೆಸುವ ಬಗ್ಗೆ ಮುಂಚಿತವಾಗಿ ಪ್ರಾಯೋಜಕರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳುವುದು.
ಮೆರವಣಿಗೆ ಮಾರ್ಗದಲ್ಲಿ ರಕ್ಷಣೆಗಾಗಿ ಪ್ರಾಯೋಜಕರು, ವ್ಯವಸ್ಥಾಪಕರು ತಮ್ಮ ಸಂಘದ ಜನರನ್ನು ನೇಮಿಸಿ ಸೂಕ್ತ ಉಸ್ತುವಾರಿಯನ್ನು ನೋಡಿಕೊಳ್ಳುವುದಲ್ಲದೇ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಯಾವುದೇ ಬೆಂಕಿ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳುವುದು ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ, ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವುದು ಒಳ್ಳೆಯದು. ಮೆರವಣಿಗೆಗಳು ಪ್ರಾರ್ಥನಾ ಸ್ಥಳ, ಚರ್ಚ್, ಮಸೀದಿಗಳ ಬಳಿ ಬಂದಾಗ ಧಾರ್ಮಿಕವಾಗಿ ನೋವುಂಟು ಮಾಡುವ ಘೋಷಣೆಗಳನ್ನು ಕೂಗಬಾರದು ಮತ್ತು ಕೃತ್ಯಗಳನ್ನು ಎಸಗಬಾರದು. ಯಾವುದೇ ಅಪರಿಚಿತ ವ್ಯಕ್ತಿ, ಸಂಶಯಾಸ್ಪದ ವಸ್ತುಗಳು ಕಂಡ ಕೂಡಲೆ ಪೊಲೀಸ್ ಕಂಟ್ರೋಲ್ ರೂಂಗಾಗಲಿ, ಸ್ಥಳೀಯ ಪೊಲೀಸ್ ಠಾಣೆಗಾಗಲಿ, ಸ್ಥಳದಲ್ಲಿರುವ ಪೊಲೀಸರಿಗಾಗಲಿ ಅಥವಾ ಗರುಡ, ಪಿಸಿಆರ್, ಕೋಬ್ರಾ ವಾಹನಗಳಿಗಾಗಲಿ ತಿಳಿಸುವುದು. ಈ ಎಲ್ಲ ನಿಬಂಧನೆಗಳನ್ನು ಉಲ್ಲಂಘಿಸಿದರೆ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣಿಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ. 100, 2418139, 2418339 ಗೆ ಮಾಹಿತಿ ನೀಡಬಹುದಾಗಿದೆ.