ಮೈಸೂರು: ಅಧ್ಯಯನಕ್ಕೆಂದು ಸಾಂಸ್ಕೃತಿಕ ಮೈಸೂರಿಗೆ ಭೇಟಿ ನೀಡಿರುವ ವಿಯೆಟ್ನಾಂ ದೇಶದ ಯುವಜನ ನಿಯೋಗವನ್ನು ಸರಸ್ವತಿಪುರಂನಲ್ಲಿರುವ ಯೂತ್ ಹಾಸ್ಟೆಲ್ ನಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ನೆಹರು ಯುವ ಕೇಂದ್ರ, ಸ್ನೇಹ ಸ್ಪಂದನ ಮಹಿಳಾ ಮಂಡಲಿ ಸಹಯೋಗದಲ್ಲಿ ಭಾನುವಾರ ಯೂತ್ ಹಾಸ್ಟೆಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯುವಜನ ನಿಯೋಗವನ್ನು ಬರಮಾಡಿಕೊಂಡಿದ್ದಲ್ಲದೆ ಅವರಿಗೆ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ, ಆಚಾರವಿಚಾರಗಳ ಬಗ್ಗೆ ತಿಳಿಸಿಕೊಡಲಾಯಿತು. ಅಲ್ಲದೆ ಮಹಿಳಾ ಸಶಕ್ತೀಕರಣದ ಬಗ್ಗೆ ಹಲವು ಮಾಹಿತಿಗಳನ್ನು ನೀಡಲಾಯಿತು. ಜೀವನದ ಮೌಲ್ಯ, ಆಚಾರ-ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ವಿಯೇಟ್ನಾಂದ ಜತೆ ಮಾಡಿಕೊಂಡಿರುವ ಒಪ್ಪಂದಂತೆ ಭಾರತಕ್ಕೆ ಭೇಟಿ ನೀಡಿರುವ ವಿಯೆಟ್ನಾಂನ ಯುವಕರ ನಿಯೋಗ ಭಾನುವಾರ ಮೈಸೂರಿಗೆ ಆಗಮಿಸಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ವಿಯೆಟ್ನಾಂ ದೇಶದವರು ನಮ್ಮ ದೇಶದ ಕಲೆ, ಸಂಸ್ಕೃತಿ, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ನಾವು ಅವರ ದೇಶದ ಮೌಲ್ಯಗಳನ್ನು ತಿಳಿಯಲು ವಿಚಾರ ವಿನಿಮಯ ಮಾಡಿಕೊಳ್ಳಲು ಈ ವೇದಿಕೆ ಉಪಯುಕ್ತವಾಗಿದೆ. ಹೆಚ್ಚೆಚ್ಚು ಸಂವಾದಗಳು ನಡೆದಾಗ ಮಾಹಿತಿ ವಿನಿಮಯವಾಗುತ್ತದೆ. ಅಲ್ಲದೆ ಅಲ್ಲಿನ ಸಂಸ್ಕೃತಿಯ ಬಗ್ಗೆಯೂ ತಿಳಿದುಕೊಳ್ಳಬಹುಹದು. ಈ ರೀತಿಯ ನಿಯೋಗಗಳು ಭೇಟಿ ನೀಡುವುದು ಅಂತಾರಾಷ್ಟ್ರೀಯ ಸಾಹೌರ್ದಕ್ಕೆ ಬುನಾದಿಯಾಗುವುದಲ್ಲದೆ ಸಂಬಂಧವನ್ನು ವೃದ್ಧಿಸುತ್ತವೆ ಎಂದು ಹೇಳಿದರು. ವಿಯೆಟ್ನಾಂ ದೇಶದ ಯುವಜನ ನಿಯೋಗಕ್ಕೆ ಸ್ವಾಗತ ಮತ್ತು ಸಂವಾದದಲ್ಲಿ ವೇದ ಉಪನಿಷತ್ತುಗಳ ಕಾಲದಿಂದಲೂ ನಮಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು, ಸರ್ಕಾರಗಳು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತ ಮಹಿಳಾ ಸಬಲೀಕರಣಕ್ಕೆ ಮುಂದಾಗಿವೆ ಎಂದು ಮಾಹಿತಿ ನೀಡಿದರು. ವಿದೇಶಿಗರು ಮಹಿಳಾ ಸಶಕ್ತೀಕರಣದ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು.
ನಿಯೋಗದಲ್ಲಿ ಐವರು ಹುಡುಗಿಯರು, ಐವರು ಹುಡುಗರು ಪಾಲ್ಗೊಂಡಿದ್ದು ಸಂವಾದದ ನಂತರ ಸಿಲ್ಕ್ ಫ್ಯಾಕ್ಟರಿಗೆ ಭೇಟಿ ನೀಡಿ ರೇಷ್ಮೆ ಸೀರೆಯ ಸೊಬಗನ್ನು ಕಣ್ತುಂಬಿಕೊಂಡರು. ಸಂಜೆ ಪ್ರಸಿದ್ಧ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪುನೀತರಾದರು. ಅಂಬಾ ವಿಲಾಸ ಅರಮನೆಯ ದೀಪಾಲಂಕರಕ್ಕೆ ಬೆರಗಾದರು. ಹೋಟೆಲ್ ರಿಗಾಲಿಸ್ನಲ್ಲಿ ಉಳಿದುಕೊಂಡಿದ್ದು, ಸೋಮವಾರ ಇನ್ಪೋಸಿಸ್ಗೆ ಭೇಟಿ ನೀಡಿದ ಬಳಿಕ ತೆರಳಲಿದ್ದಾರೆ ಎಂದು ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ತಿಳಿಸಿದರು.
ಕಾರ್ಯಕ್ರಮದಲ್ಲಿ ದಿಲ್ಲಿಯ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಧೀನ ಕಾರ್ಯದರ್ಶಿ ಐ.ಬಿ.ಲೆಂಕಾ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಜ್ಯೋತಿ ಶಂಕರ್, ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಾಪಾಲನ ವಿಭಾಗದ ನಿರ್ದೇಶಕ ಡಾ.ಎಂ.ರುದ್ರಯ್ಯ, ಮೈಸೂರು ವಿವಿ ರಾಸೇಯೋ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಬಿ.ಚಂದ್ರಶೇಖರ್, ಆರ್ ಐಐಐಟಿ ಸಂಸ್ಥಾಪಕ ಎಸ್.ವಿ.ವೆಂಕಟೇಶ್, ಸ್ನೇಹ ಸ್ಪಂದನ ಮಹಿಳಾ ಮಂಡಲಿ ಅಧ್ಯಕ್ಷೆ ವಿಜಯ ರಾಧಾಕೃಷ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಅಧ್ಯಯನಕ್ಕೆಂದು ಸಾಂಸ್ಕೃತಿಕ ಮೈಸೂರಿಗೆ ಭೇಟಿ ನೀಡಿರುವ ವಿಯೆಟ್ನಾಂ ದೇಶದ ಯುವಜನ ನಿಯೋಗವನ್ನು ಸರಸ್ವತಿಪುರಂನಲ್ಲಿರುವ ಯೂತ್ ಹಾಸ್ಟಲ್ ನಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಜಿಲ್ಲಾಧಿಕಾರಿ ಡಿ.ರಂದೀಪ್, ದಿಲ್ಲಿಯ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಧೀನ ಕಾರ್ಯದರ್ಶಿ ಐ.ಬಿ.ಲೆಂಕಾ, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ಇದ್ದಾರೆ.