ಮೈಸೂರು: ರಂಗಾಯಣದಲ್ಲಿ ಪ್ರತಿವರ್ಷದಂತೆ ನಡೆಸುವ ಚಿಣ್ಣರ ಮೇಳದಲ್ಲಿ ಭಾಗವಹಿಸಲು ಈ ವರ್ಷವೂ ಕೂಡ ಏಪ್ರಿಲ್ 10ರಿಂದ ಮೇ.10ರವರೆಗೆ ಸಮಾನತೆ ಚಿಣ್ಣರಮೇಳ-2017ನ್ನು ಆಯೋಜಿಸಲಾಗಿದ್ದು, ಎಪ್ರಿಲ್ 3ರಂದು ಅರ್ಜಿಗಳನ್ನು ವಿತರಿಸಲಾರಂಭಿಸಿದ್ದಾರೆ. ಅರ್ಜಿಯನ್ನು ಪಡೆಯುವಲ್ಲಿ ಜನಸಮೂಹವೇ ಕಂಡು ಬಂದಿದ್ದು, ನೂಕುನುಗ್ಗಲು ಉಂಟಾಗಿದೆ.
ಚಿಣ್ಣರ ಮೇಳದಲ್ಲಿ ತಮ್ಮ ಮಕ್ಕಳೂ ಸಹ ಪಾಲ್ಗೊಳ್ಳುವಂತಾಗಬೇಕು, ಕಲೆ, ಸಾಹಿತ್ಯ, ನಾಟಕ ಸೇರಿದಂತೆ ತಮ್ಮ ಮಕ್ಕಳೂ ಸಹ ಅನೇಕ ರೀತಿಯ ಕಲಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಚಿಣ್ಣರ ಪಾಲಕರು ಅರ್ಜಿ ಪಡೆಯಲು ಕಾಯುತ್ತಿದ್ದರು. ಕೆಲವರು ತಮಗೆಲ್ಲಿ ಅರ್ಜಿಗಳು ಸಿಗುವುದಿಲ್ಲವೇನೋ, ತಮ್ಮ ಮಕ್ಕಳೆಲ್ಲಿ ಚಿಣ್ಣರ ಮೇಳದಿಂದ ವಂಚಿತರಾಗುತ್ತಾರೇನೋ ಅಂದುಕೊಂಡು ಭಾನುವಾರ ರಾತ್ರಿಯಿಂದಲೇ ದೂರದ ಊರುಗಳಿಂದ ಆಗಮಿಸಿ ಕಾಯತೊಡಗಿರುವುದು ಕಂಡು ಬಂತು.
14 ವರ್ಷದ ವಯೋಮಿತಿಯೊಳಗಿನ ಚಿಣ್ಣರಿಗಾಗಿ ಏರ್ಪಡಿಸುವ ಈ ಚಿಣ್ಣರ ಮೇಳವು 19ನೇ ಚಿಣ್ಣರಮೇಳವಾಗಿದ್ದು, ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಚರಿಸಲು ಮಕ್ಕಳ ಲೋಕವನ್ನು ಪರಿಣಾಮಕಾರಿಯಾಗಿ ಸೃಷ್ಟಿಸಲು ಮುಂದಾಗಿದೆ. ಮಕ್ಕಳೊಂದಿಗೆ ಅತಿ ಸೂಕ್ಷ್ಮ ವರ್ತನೆ ಅಗತ್ಯವಾಗಿದ್ದು, ಅವರ ಕಲ್ಪನೆಗಳು ಮುಕ್ಕಾಗದ ಹಾಗೆ ಅವರ ಭಾಷೆ, ಭಾವಗಳನ್ನು ಅರ್ಥಮಾಡಿಕೊಂಡು ಅವರದ್ದೇ ಲೋಕವನ್ನು ಒಲವಿನ ಒಡನಾಟದೊಂದಿಗೆ ಉಲ್ಲಾಸ, ಸಂತಸದ ವಾತಾವರಣವನ್ನು ನಿರ್ಮಿಸಿ ಮಕ್ಕಳು ನಲಿಯುತ್ತ ಕಲಿಯಬೇಕೆನ್ನುವ ಉದ್ದೇಶದಿಂದ ಸಮಾನತೆ-ಚಿಣ್ಣರಮೇಳ-2017ನ್ನು ಆಯೋಜಿಸಲಾಗಿದೆ. ಏಪ್ರಿಲ್ 10ರಂದು ಚಿಣ್ಣರ ಮೇಳಕ್ಕೆ ಚಾಲನೆ ದೊರಕಲಿದೆ.