ಮೈಸೂರು: ನಗರದ ಜೆ.ಕೆ ಮೈದಾನದಲ್ಲಿರುವ ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ 2016-17ರ ಘಟಿಕೋತ್ಸವ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಮಾರಂಭದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ ಮಾತನಾಡಿ ವೈದ್ಯರು ಮುಗುಳುನಗುತ್ತಾ ಚಿಕಿತ್ಸೆ ನೀಡಿದರೆ ಅರ್ಧ ಕಾಯಿಲೆ ವಾಸಿಯಾಗುತ್ತದೆ. ವಿವಿಧ ಕ್ಷೇತ್ರದ ಎಲ್ಲಾ ವೃತ್ತಿಗಳಿಗಿಂತಲೂ ವೈದ್ಯವೃತ್ತಿ ಶ್ರೇಷ್ಠವಾದುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿದಿನವೂ ನೂತನ ಆವಿಷ್ಕಾರ, ಸಂಶೋಧನೆಗಳಾಗುತ್ತವೆ. ವೈದ್ಯನಾದವನು ಪ್ರತಿದಿನವೂ ಹೊಸದನ್ನು ಕಲಿಯಬೇಕು. ತನ್ನಲ್ಲಿನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಸಮಾಜವನ್ನು ರೋಗಮುಕ್ತಗೊಳಿಸಿ ಆರೋಗ್ಯಯುತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವೈದ್ಯರ ಪಾತ್ರ ಬಹಳ ಹಿರಿದು. ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಪ್ರತಿನಿತ್ಯ ನೂರಾರು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಅವರನ್ನು ಕಂಡಾಗ ಮುಗುಳುನಗೆ ಬೀರಿ ಪ್ರೀತಿಯಿಂದ ಮಾತನಾಡಿಸಿದರೆ ಔಷಧಿಯಿಲ್ಲದೆ ಅರ್ಧ ಕಾಯಿಲೆಯನ್ನು ಗುಣಪಡಿಸಬಹುದು. ಆಗ ರೋಗಿಯು ನೀವು ನೀಡುವ ಎಲ್ಲಾ ಸಲಹೆಗಳನ್ನು ಪಡೆದುಕೊಳ್ಳುತ್ತಾನೆ.
ಸರ್ಕಾರ ಒಬ್ಬ ವೈದ್ಯನಿಗೆ 10ರಿಂದ 20 ಲಕ್ಷ ಖರ್ಚು ಮಾಡುತ್ತಿದ್ದು, ವಿದ್ಯಾಭ್ಯಾಸ ಮುಗಿಸಿದ ಬಳಿಕ ಸಮಾಜದಿಂದ ಪಡೆದುಕೊಂಡಿದ್ದನ್ನು ಮರಳಿ ನೀಡಬೇಕು.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿರಬೇಕು. ಆದರೆ ಭಾರತದಲ್ಲಿನ ಜನಸಂಖ್ಯೆ 120ಕೋಟಿ ಮೀರಿದ್ದು 1700 ಮಂದಿಗೆ ಒಬ್ಬ ವೈದ್ಯನಿದ್ದಾನೆ. ಹಾಗಾಗಿ ಇರುವ ಸೌಲಭ್ಯಗಳನ್ನೇ ಉತ್ತಮವಾಗಿ ಬಳಸಿಕೊಂಡು ಅತ್ಯುತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.