ಉಳ್ಳಾಲ: ಕಾಸರಗೋಡಿನಿಂದ ಅಪಹರಿಸಲ್ಪಟ್ಟ ಬಾಲಕಿಯನ್ನು ರಿಕ್ಷಾ ಚಾಲಕರೊಬ್ಬರು ಸೋಮೇಶ್ವರ ರೈಲ್ವೇ ನಿಲ್ದಾಣದಿಂದ ಉಳ್ಳಾಲ ದರ್ಗಾಕ್ಕೆ ತಲುಪಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಆಕೆಯನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ.
ಕಾಸರಗೋಡಿನ ಕೋಟಿಕುಳಂನ 12ರ ಬಾಲಕಿ ಮದರಸ ಶಿಕ್ಷಣಕ್ಕೆಂದು ತೆರಳಿದ್ದು, ರೈಲು ಮೂಲಕ ಬಂದಿದ್ದ ಬಾಲಕಿ ಸೋಮೇಶ್ವರ ರೈಲು ನಿಲ್ದಾಣದಲ್ಲಿ ಗಾಬರಿಯಿಂದ ಕೂಗುತ್ತಿದ್ದಾಗ ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಉಳ್ಳಾಲ ದರ್ಗಾಕ್ಕೆ ಕರೆ ತಂದಿದ್ದರು.
ಅಪಹರಣ ಶಂಕೆ: ಬಾಲಕಿಯ ಹೇಳಿಕೆಯಂತೆ ತಾನು ಬೆಳಗ್ಗೆ ಮದರಸಕ್ಕೆಂದು ಹೋಗುತ್ತಿದ್ದಾಗ ಹಿಂದೆ ಬಂದ ಅಪರಿಚಿತರು ಬಟ್ಟೆಯನ್ನು ಮುಖಕ್ಕೆ ಹಿಡಿದಿದ್ದು, ಈ ಸಂದರ್ಭದಲ್ಲಿ ಸ್ಮೃತಿ ತಪ್ಪಿದ ತಾನು ಎಚ್ಚರವಾದಾಗ ರೈಲಿನಲ್ಲಿದ್ದೆ. ರೈಲು ನಿಂತಾಗ ಗಾಬರಿಯಿಂದ ಇಳಿದು ಕೂಗಲು ಪ್ರಾರಂಭಿಸಿದಾಗ ಸ್ಥಳೀಯರು ವಿಚಾರಿಸಿ ನನ್ನನ್ನು ಇಲ್ಲಿಗೆ ಕರೆ ತಂದರು ಎಂದು ತಿಳಿಸಿದ್ದಾಳೆ. ದರ್ಗಾದಲ್ಲಿ ಬಂದಿದ್ದ ಬಾಲಕಿಯಿಂದ ಮಾಹಿತಿ ಪಡೆದ ದರ್ಗಾ ಸಮಿತಿಯವರು ಆಕೆಯ ಮನೆಗೆ ಮಾಹಿತಿ ನೀಡಿದ್ದು, ಮನೆಯಲ್ಲಿ ಬಾಲಕಿಯನ್ನು ಹುಡುಕಾಡುತ್ತಿದ್ದ ಪಾಲಕರು ಮಂಗಳೂರಿನಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಿ ಉಳ್ಳಾಲ ದರ್ಗಾಕ್ಕೆ ಕಳುಹಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ದರ್ಗಾ ಆಗಮಿಸಿದ ಬಾಲಕಿಯ ಪಾಲಕರು ಬಾಲಕಿಯನ್ನು ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರಕರಣ ಸುಖಾಂತ್ಯಗೊಂಡಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿಲ್ಲ.
ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ರಶೀದ್ ಉಳ್ಳಾಲ್ ಮತ್ತು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.