ಮೈಸೂರು: ನಂಜನಗೂಡು (ಪ.ಜಾ) ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ 236 ಮತಗಟ್ಟೆಗಳಲ್ಲೂ ಬಳಸಲಾಗುವ ವಿದ್ಯುನ್ಮಾನ ಮತ ಯಂತ್ರ ಹಾಗೂ ಮತದಾರರಿಗೆ ಮತ ಚಲಾವಣೆಯನ್ನು ತೋರಿಸುವ ವಿವಿಪ್ಯಾಟ್ ನ ಪಾರದರ್ಶಕತೆಯನ್ನು ಖಾತರಿಪಡಿಸಿಕೊಳ್ಳಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದ್ದಾರೆ.
ಮಾರ್ಚ್ 29 ರಿಂದ 31 ರವರೆಗೆ ಮೊದಲ ಹಂತದ ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಪರಿಶೀಲನಾ ಕಾರ್ಯವನ್ನು ಅಭ್ಯರ್ಥಿಗಳು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಗಳ ಮೊದಲ ಹಾಗೂ ಎರಡನೇ ಹಂತದ ರ್ಯಾಂಡಮೈಷೇಶನ್ ಹಾಗೂ ಮತಗಟ್ಟೆಗಳಿಗೆ ಹಂಚಿಕೆ ಕಾರ್ಯವನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿ ಏಪ್ರಿಲ್ 3 ರಂದು ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಲೆಟ್ ಯೂನಿಟ್ ಗೆ ಅಭ್ಯರ್ಥಿಗಳ ಹೆಸರು ಅಳವಡಿಕೆ ಹಾಗೂ ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಬಳಸಿ ಅಣುಕು ಮತದಾನವನ್ನು ಏಪ್ರಿಲ್ 3 ಮತ್ತು 4 ರಂದು ಅಳವಡಿಸಲಾಗಿದೆ.
ಒಟ್ಟು 236 ಮತಗಟ್ಟೆಗಳಿರುವುದರಿಂದ ಕನಿಷ್ಠ ಶೇ.5 ರಷ್ಟು ಇವಿಎಂಗಳನ್ನು ಅಂದರೆ 13 ಇಎಂವಿಗಳನ್ನು ಬಳಸಿ ಪ್ರತಿ ಮತಯಂತ್ರದಲ್ಲಿ ಒಂದು ಸಾವಿರ ಮತಗಳನ್ನು ಈ ಅಣುಕು ಮತದಾನದಲ್ಲಿ ಮಾಡಲಾಗಿದೆ. ಫಲಿತಾಂಶ ಹಾಗೂ ವಿವಿಪ್ಯಾಟ್ ಪ್ರಿಂಟ್ ಔಟ್ ಪರಿಶೀಲನೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಲೆಟ್ ಯೂನಿಟ್ ಹಾಗೂ ಕಂಟ್ರೋಲ್ ಯೂನಿಟ್ ಮತ್ತು ವಿವಿ ಪ್ಯಾಟ್ ಪರಿಶೀಲನೆ ಹಾಗೂ ಅಣುಕು ಮತದಾನದ ನಂತರ ಎಲ್ಲ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್ ನಲ್ಲಿ ಅಭ್ಯರ್ಥಿಗಳು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಭದ್ರ ಪಡಿಸಿ ಕೇಂದ್ರೀಯ ಸಶಸ್ತ್ರ ಅರೆ ಮಿಲಿಟರಿ ಪಡೆ ವಶಕ್ಕೆ ನೀಡಲಾಗುವುದು. ಸ್ಟ್ರಾಂಗ್ ರೂಮ್ ಗಳನ್ನು ಏಪ್ರಿಲ್ 8 ರಂದು ಮಸ್ಟರಿಂಗ್ ಮಾಡುವ ದಿನ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಚುನಾವಣಾಧಿಕಾರಿ, ಅಭ್ಯರ್ಥಿಗಳ ಉಸ್ತುವಾರಿಯಲ್ಲಿ ತೆರೆಯಲಾಗುವುದು.
ಮತದಾನ ದಿನವೂ ಸಹ ಆರಂಭದಲ್ಲಿ ಅಣುಕು ಮತದಾನ ಮಾಡಿ ನಂತರ ಮತದಾನ ಪ್ರಕ್ರಿಯೆ ಮುಂದುವರೆಸಲಾಗುವುದು. ಮತ ಯಂತ್ರಗಳ ಕಾರ್ಯನಿರ್ವಹಣೆಯ ಪಾರದರ್ಶಕತೆಯನ್ನು ಎಲ್ಲ ಹಂತಗಳಲ್ಲಿಯೂ ಖಾತರಿಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದ್ದಾರೆ.