ಮೈಸೂರು: ನಂಜನಗೂಡು (ಮೀಸಲು) ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯು ಏ. 9ರಂದು ನಡೆಯಲಿರುವುದರಿಂದ ಚುನಾವಣೆ ದಿನದಂದು ಮತದಾರರಿಗೆ ಮುಕ್ತ ಮತದಾನಕ್ಕೆ ಅವಕಾಶ ನೀಡುವ ಉದ್ದೇಶದಿಂದ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಸಂತೆ, ಜಾತ್ರೆ ಉತ್ಸವಗಳನ್ನು ಮುಂದೂಡಲಾಗಿದೆ.
ಬಸ್ ವ್ಯವಸ್ಥೆ:
ಚುನಾವಣೆ ಹಿನ್ನಲೆಯಲ್ಲಿ ಏ.8ರಂದು ಮಸ್ಟರಿಂಗ್ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ ಮೈಸೂರು, ಟಿ.ನರಸೀಪುರ, ಹೆಚ್.ಡಿ.ಕೋಟೆ ತಾಲ್ಲೂಕುಗಳಿಂದ ನಂಜನಗೂಡು ತಾಲೂಕಿನ ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ನೇಮಕಗೊಂಡ ಸಿಬ್ಬಂದಿಗಳು ನಂಜನಗೂಡು ತಾಲೂಕಿಗೆ ತೆರಳಲು ಕೆಎಸ್ಆರ್ ಟಿಸಿ ಸಂಸ್ಥೆಯ ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಎದುರಿನಲ್ಲಿರುವ ಪಿಪಲ್ಸ್ ಪಾರ್ಕ್ ನಿಂದ ಬೆಳಿಗ್ಗೆ 6.45ಕ್ಕೆ ಬಸ್ಸುಗಳು ಹೊರಡಲಿದೆ. ಟಿ.ನರಸೀಪುರ ತಾಲೂಕು ಕಚೇರಿಯಿಂದ ಬೆಳಿಗ್ಗೆ 6.45ಕ್ಕೆ ಬಸ್ಸುಗಳು ಹೊರಡಲಿದೆ. ಹೆಚ್.ಡಿ. ಕೋಟೆ ತಾಲೂಕು ಕಚೇರಿಯಿಂದ ಬೆಳಿಗ್ಗೆ 6.45ಕ್ಕೆ ಬಸ್ಸುಗಳು ಹೊರಡಲಿದ ಎಂದು ಜಿಲ್ಲಾಧಿಕಾರಿಗಳಾದ ರಂದೀಪ್ ಡಿ. ಅವರು ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ:
ಉಪ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿ ಹಾಗೂ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಅಬಕಾರಿ ನಿಯಮಗಳ ಅನ್ವಯ ಏ. 7ರ ಸಂಜೆ 5 ಗಂಟೆಯಿಂದ ಏ.9ರ ಮಧ್ಯ ರಾತ್ರಿಯವರೆಗೆ ಮತ್ತು ಮತ ಎಣಿಕೆ ಅಂಗವಾಗಿ ಏಪ್ರಿಲ್ 12 ರ ಮಧ್ಯರಾತ್ರಿಯಿಂದ ಏಪ್ರಿಲ್ 13ರ ಮಧ್ಯರಾತ್ರಿಯವರೆಗೆ ನಂಜನಗೂಡು ತಾಲೂಕಿನಾದ್ಯಂತ ಎಲ್ಲ ವಿಧದ ಮದ್ಯಂಗಡಿಗಳನ್ನು ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸಗಳೆಂದು ಘೋಷಿಸಿ ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ಆದೇಶ ಹೊರಡಿಸಿದ್ದಾರೆ.