ಮೈಸೂರು: ನಗರದಲ್ಲಿ ಬ್ರೌನ್ ಶುಗರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಮಾಲು ಸಹಿತ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ನರಿಪುರ ಗ್ರಾಮದ ನಿವಾಸಿ ಕೆ.ರಾಜ(28), ಕೆಂಗೇರಿಯ ಸ್ಯಾಟ್ಲೈಟ್ ಟೌನ್ ನ ಎನ್.ವಿಶ್ವನಾಥ್(44), ತಮಿಳುನಾಡಿನ ಊಟಿಯ ಅಬ್ದುಲ್ ರಜಾಕ್(51), ಮೈಸೂರು ಲಷ್ಕರ್ ಮೊಹಲ್ಲದ ಮಹಮ್ಮದ್ ಸೇಠ್ ಬ್ಲಾಕ್ ನ ಪೈರೋಜ್ ಖಾನ್(46) ಬಂಧಿತ ಆರೋಪಿಗಳಾಗಿದ್ದಾರೆ.
ಈ ಆರೋಪಿಗಳು ಮೈಸೂರಿನಲ್ಲಿ ಬ್ರೌನ್ ಶುಗರನ್ನಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಮೈಸೂರಿನ ಕೆಲವು ಪ್ರತಿಷ್ಠಿತ ಕಾಲೇಜುಗಳು, ಬೈಲುಕುಪ್ಪೆಯ ಟಿಬೆಟ್ ಕ್ಯಾಂಪ್ ಸೇರಿದಂತೆ ಹಲವೆಡೆ ಗಾಂಜಾ ಮತ್ತು ಬ್ರೌನ್ ಶುಗರ್ ನ ವ್ಯಸನಿಗಳಿರುವುದರಿಂದ ಹೆಚ್ಚಿನ ಬೇಡಿಕೆಯಿದೆ ಎನ್ನಲಾಗುತ್ತಿದ್ದು, ನಗರದ ಕೆಲವು ಗಲ್ಲಿಗಳಿಗೆ ಗೂಡಂಗಡಿ, ರಸ್ತೆ ಬದಿಯ ವ್ಯಾಪಾರಿಗಳಿಗೆ ಮಾಲನ್ನು ತಲುಪಿಸಲಾಗುತ್ತಿದ್ದು, ಖಾಯಂ ಗಿರಾಕಿಗಳಿಗೆ ಇಲ್ಲಿಂದ ಸರಬರಾಜಾಗುತ್ತದೆ.
ಈ ನಡುವೆ ಲಷ್ಕರ್ ಮೊಹಲ್ಲಾದ ಸತ್ತಾರ್ ಸೇಠ್ ಬ್ಲಾಕ್, ಜಿ.ಎಸ್.ಕಾನ್ವೆಂಟ್ ರಸ್ತೆಯಲ್ಲಿರುವ ಯ-ಅಲ್ಲಾ ಮಸೀದಿಯ ಕಾಂಪೌಂಡ್ ಬಳಿ ಕೆಲವರು ಬ್ರೌನ್ ಶುಗರನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಹೀಗಾಗಿ ಮೈಸೂರು ನಗರದ ಸಿಸಿಬಿ ಘಟಕದ ಎಸಿಪಿ ಸಿ.ಗೋಪಾಲ್, ಸಿಐ ಕೆ.ಸಿ.ಪ್ರಕಾಶ್, ಪಿಎಸ್ಐ ಹೆಚ್. ರಮೇಶ್, ಎಎಸ್ಐ ಕೆ. ವಿಜಯ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು, ಈ ಸಂದರ್ಭ ಎನ್.ವಿಶ್ವನಾಥ್, ಅಬ್ದುಲ್ ರಜಾಕ್, ಪೈರೋಜ್ ಖಾನ್ ಮತ್ತು ಕೆ.ರಾಜ ಅವರು ಪ್ಲಾಸ್ಟಿಕ್ ಕವರ್ ನಲ್ಲಿಟ್ಟಿದ್ದ ಸುಮಾರು 3 ಲಕ್ಷ ಬೆಲೆ ಬಾಳುವ 915 ಗ್ರಾಂ ಬ್ರೌನ್ ಶುಗರ್ ಹಾಗೂ 610ರೂ. ನಗದು ಸಿಕ್ಕಿದೆ.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.