ಮೈಸೂರು: ನಂಜನಗೂಡು ಗುಂಡ್ಲಪೇಟೆ ಉಪಚುನಾವಣೆ ಜಿದ್ದಾ ಜಿದ್ದಿ ಮುಗಿದಿದ್ದು ಇಂದು ಅಭ್ಯರ್ಥಿಗಳು ವಿಶ್ರಾಂತಿಯ ಜೊತೆಗೆ ಗೆಲುವಿನ ಲೆಕ್ಕಚಾರದಲ್ಲಿ ತೊಡಗಿದ್ದು ಸ್ಥಳೀಯ ನಾಯಕರಿಂದ ತಮ್ಮ ತಮ್ಮ ಬೂತ್ ಗಳಲ್ಲಿ ಮತದಾನದ ಪ್ರಮಾಣದ ಮಾಹಿತಿಯನ್ನ ಪಡೆಯುವುದರೊಂದಿಗೆ ತಲ್ಲೀನರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವಿನ ಜಿದ್ದಾ ಜಿದ್ದಿ ಎಂದೇ ಬಿಂಬತವಾಗಿರುವ ನಂಜನಗೂಡು ಗುಂಡ್ಲಪೇಟೆ ಉಪಚುನಾವಣೆಯಲ್ಲಿ ಜಾತಿ ಮತ್ತು ಹಣದ ಹೊಳೆಯೇ ಹರಿದಿದ್ದು ಜೊತೆಗೆ ನಂಜನಗೂಡಿನಲ್ಲಿ ಶೇ77.56, ಗುಂಡ್ಲಪೇಟೆ ಶೇ 87.10 ದಾಖಲೆಯ ಮತದಾನವಾಗಿದ್ದು, ಗೆಲುವಿನ ಲೆಕ್ಕಚಾರದಲ್ಲಿ ಎಲ್ಲಾ ಅಭ್ಯರ್ಥಿಗಳು ತೊಡಗಿದ್ದಾರೆ.
ರಿಲ್ಯಾಕ್ಸ್ ಜೊತೆಗೆ ಲೆಕ್ಕಚಾರದಲ್ಲಿ ಅಭ್ಯರ್ಥಿಗಳು:
ನಂಜನಗೂಡು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕಳಲೇ ಕೇಶವಮೂರ್ತಿ ಇಂದು ನಂಜನಗೂಡಿನಲ್ಲಿ ಇರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಅವರ ಮನೆಯಲ್ಲಿ ನಂಜನಗೂಡು ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು ಪ್ರಮುಖ ಮುಖಂಡರುಗಳಿಂದ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ಮತದಾನದ ಪ್ರಮಾಣ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಭ್ಯರ್ಥಿ ಕಳಲೇ ಕೇಶಮೂರ್ತಿ ಮಾಹಿತಿ ಪಡೆಯುತ್ತಿದ್ದು, ಈ ಸಂಧರ್ಭದಲ್ಲಿ ನೂರಕ್ಕೆ ನೂರರಷ್ಟು ಗೆಲುವ ವಿಶ್ವಾಸವನ್ನ ಹೊಂದಿರುವ ಕಳಲೇ ಕೇಶವಮೂರ್ತಿ ಲವ ಲವಿಕೆಯಿಂದ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದರು.
ಇನ್ನೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ನೆಲೆಯೇ ಇಲ್ಲದ ಕ್ಷೇತ್ರದಲ್ಲಿ ಯಡಿಯೂರಪ್ಪ ಬಲದಿಂದ ಗೆಲುವ ವಿಶ್ವಾಸ ಹೊಂದಿದ್ದು, ಇಂದು ಬೆಳಗ್ಗೆ ತಮ್ಮ ಮೈಸೂರಿನ ಮನೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಗೆಲುವಿನ ಲೆಕ್ಕಚಾರದಲ್ಲಿ ತೊಡಗಿದ್ದು, ಕ್ಷೇತ್ರದಲ್ಲಿ ಮತದಾನದ ಹಿಂದಿನ ದಿನ ಕಾಂಗ್ರೆಸ್ ಪಕ್ಷ ಹಣ, ಹೆಂಡ ಹಂಚಿದ್ದು ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದ್ದು, ನಾನು ಗೆಲುತ್ತೇನೆ ಆದರೆ ಕಡಿಮೆ ಅಂತರದಿಂದ ಗೆಲುವು ಆಗಬಹುದು ಎನ್ನುತ್ತಾರೆ.
ಇನ್ನೂ ಗುಂಡ್ಲಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್, ಬಿಡುವಿಲ್ಲದ ಪ್ರಚಾರದಿಂದ ಬಳಲಿದ್ದು, ಮೈಸೂರಿನ ತಮ್ಮ ಮನೆಯಲ್ಲಿ ಮೊಮ್ಮಗಳೊಂದಿಗೆ ಆಟವಾಡುತ್ತ ವಿಶ್ರಾಂತಿ ಪಡೆಯುತ್ತಿದ್ದು, ನೂರಕ್ಕೆ ನೂರರಷ್ಟು ಗೆಲುವಿನ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಗೆಲುವಿನ ತಂತ್ರ ರೂಪಿಸಿದ ಸಿಎಂ?:
ಕಳೆದ 10 ದಿನಗಳಿಂದ ಉಪಚುನಾವಣೆಗಳನ್ನ ಗೆಲಲ್ಲಬೇಕೆಂಬ ಪ್ರತಿಷ್ಟೆಯಿಂದ ಎರಡು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತದಾನದ ಹಿಂದಿನ ದಿನ ಮೈಸೂರಿನಲ್ಲೇ ಉಳಿದು ಎರಡು ಕ್ಷೇತ್ರದ ಪ್ರಮುಖ ಮುಖಂಡರಿಗೆ ಫೋನ್ ಮೂಲಕವೇ ತಂತ್ರ ರೂಪಿಸಿ, ಮತದಾನ ಮುಕ್ತಯವಾದ ನಂತರ ಗುಪ್ತ ಇಲಾಖೆಯಿಂದ ಎರಡು ಕ್ಷೇತ್ರದ ಮಾಹಿತಿ ಪಡೆದು ಗೆಲುವಿನ ವಿಶ್ವಾಸದೊಂದಿಗೆ ನಗರದ ಮಾಲ್ ನಲ್ಲಿ ರಾಜಕುಮಾರ ಸಿನಿಮಾ ನೋಡಿ ಬೆಂಗಳೂರಿಗೆ ವಾಪಸ್ಸಾಗಿದ್ದು, ಸಿಎಂ ರೂಪಿಸಿದ ಗೆಲುವಿನ ತಂತ್ರ ಯಶಸ್ವಿಯಾಗಿದೆ ಎನ್ನುತ್ತಾರೆ ಗುಪ್ತಚರ ಇಲಾಖೆಯ ಮೈಸೂರು ಮುಖ್ಯಸ್ಥರು.