ಮೈಸೂರು: ದೇಶದ ಕಬ್ಬು ಬೆಳೆಗಾರ ರೈತರಿಗೆ 2 ವರ್ಷಗಳಿಂದ ಕಬ್ಬಿನ ಎಫ್.ಆರ್.ಪಿ ಬೆಲೆ ಏರಿಸದೆ ರೈತರಿಗೆ ದ್ರೋಹ ಬಗೆದು ಕಬ್ಬಿನ ಬೆಳೆ ಕಡಿಮೆಯಾದ ಕಾರಣ ವಿದೇಶದಿಂದ 5 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿಲು ಮುಂದಾಗಿದ್ದು, ಆಮದುಗೆ ಅನುಮತಿ ನೀಡಬಾರದೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಸ್ರೇಲ್ ದೇಶದ ಕೃಷಿಯ ಬಗ್ಗೆ ತಿಳಿಸಲು ಇಸ್ರೇಲ್ ದೇಶದ ತಜ್ಞರಾದ ಕ್ಲೀಫ್ ಲವ್ ರವರು ಏಪ್ರಿಲ್ 15 ರಂದು ಮೈಸೂರಿಗೆ ಆಗಮಿಸಲಿದ್ದಾರೆ. ನಗರದ ಜೆ.ಎಸ್.ಎಸ್ ಆಸ್ಪತ್ರೆಯ ಪಕ್ಕದಲ್ಲಿರುವ ರಾಜೇಂದ್ರ ಭವನದಲ್ಲಿ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಕಾರ್ಯಗಾರ ನಡೆಯಲಿದ್ದು, ತೋಟಗಾರಿಕೆ ಬೆಳೆಗಳ ಬಗ್ಗೆ ವಿಶೇಷವಾಗಿ ತಿಳಿಸಿಕೊಡಲಿದ್ದಾರೆ.
ಉತ್ತರ ಪ್ರದೇಶದ ಸರ್ಕಾರ 36 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದಲ್ಲಿ 3 ವರ್ಷಗಳ ಸತತ ಬರಗಾಲವಿದ್ದರು ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ಮುಖ್ಯಮಂತ್ರಿ ಮಾಂಸದ ಅಂಗಡಿಗಳನ್ನು ಆರಂಭಿಸುವವರಿಗೆ 1.25 ಲಕ್ಷ ರೂ ಪ್ರೋತ್ಸಾಹಧನ ನೀಡಲು ಮುಂದಾಗಿರುವುದು ಹಾಸ್ಯಾಸ್ಪದವಾದ ಸಂಗತಿ. ರೈತರಿಗೆ ದ್ರೋಹ ಬಗೆಯದೇ ನ್ಯಾಯಯುತವಾಗಿ ಕನಿಷ್ಠ ರೂ 3000 ನಿಗದಿ ಪಡಿಸಿ ಒಪ್ಪಂದ ಮಾಡಿಕೊಂಡು ಕಬ್ಬು ಬೆಳೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬಡಗಲಪುರದ ನಾಗರಾಜ್, ರವಿ, ಮಂಜುನಾಥ್, ರಾಜೇಗೌಡ, ಮತ್ತಿತರರು ಹಾಜರಿದ್ದರು.