ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಏಣಿಕೆ ನಾಳೆ ನಂಜನಗೂಡಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಪದವಿ ಕಾಲೇಜಿನಲ್ಲಿ ನಡೆಯಲಿದ್ದು ಅಂದು ಬೆಳಿಗ್ಗೆ 6ರಿಂದ ಮರುದಿನ ಬೆಳಿಗ್ಗೆ 6ರವರೆಗೆ ತಾಲೂಕಿನ್ಯಾದಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾವಣಾ ಪ್ರತಿನಿಧಿಗಳು ಮತ್ತು ಸಾರ್ವಜನಿಕರ ನಿಯಂತ್ರಣ ಹಾಗೂ ಎಣಿಕೆ ಕಾರ್ಯಕ್ರಮವು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಮತ್ತು ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯ ಸುತ್ತಲೂ ಸ್ಪೊಟಕ ವಸ್ತುಗಳು, ಮಾರಕಾಸ್ತ್ರಗಳನ್ನು ಒಯ್ಯುವುದು ಹಾಗೂ 5 ಜನರಿಗಿಂತ ಹೆಚ್ಚು ಗುಂಪನ್ನು ನಿರ್ಬಂಧಿಸಲಾಗಿದೆ. ಮತ ಎಣಿಕೆ ನಂತರ ಮೆರವಣಿಗೆ, ವಿಜಯೋತ್ಸವ ನಡೆಸುವುದು ಹಾಗೂ ಪ್ರಚೋದನಕಾರಿ ಭಾಷಣಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶದಲ್ಲಿ ತಿಳಿಸಿದ್ದಾರೆ.
ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಶವ ಸಂಸ್ಕಾರಗಳಿಗೆ ವಿನಾಯಿತಿ ನೀಡಲಾಗಿದ್ದು, ಪರೀಕ್ಷೆಗೆ ತೆರಳುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ನಿಷೇಧಾಜ್ಞೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.