ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ಉತ್ಸಾಹದಲ್ಲಿದ್ದ ಯುವಕರ ಮನೆಯೀಗ ಸ್ಮಶಾನ ಮೌನವಾಗಿರುವ ಘಟನೆ ನಗರದ ಕ್ಯಾತಮಾರನ ಹಳ್ಳಿಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಕ್ಯಾತಮಾರನಹಳ್ಳಿಯ ಎ.ಕೆ.ಕಾಲೋನಿಯ ನಿಂಬೆಯಣ್ಣ ವೃತ್ತದ ಬಳಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಪೇಂಟರ್ ಕುಮಾರ್(40), ಮೈಸೂರು ನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠ(27) ಮತ್ತು ಕಾರ್ಮಿಕ ಶಿವು(25) ಮೃತಪಟ್ಟಿದ್ದಾರೆ.
ಇಂದು(ಏ.14) ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ಕ್ಯಾತಮಾರನಹಳ್ಳಿಯ ಯುವಕರು ಒಟ್ಟು ಸೇರಿ ಬೃಹತ್ ಕಟೌಟ್ ತಯಾರು ಮಾಡಿ ಅದನ್ನು ಎ.ಕೆ.ಕಾಲೋನಿಯ ನಿಂಬೆಯಣ್ಣ ವೃತ್ತದ ಬಳಿ ನಿಲ್ಲಿಸಲು ಮುಂದಾಗಿದ್ದರು. ರಾತ್ರಿವೇಳೆಯಾದ್ದರಿಂದ ಮೇಲೆ ಹಾದುಹೋಗಿದ್ದ ವಿದ್ಯುತ್ ಕಟೌಟ್ ಗೆ ತಾಗಬಹುದೆಂಬ ನಿರೀಕ್ಷೆಯನ್ನು ಯಾರೂ ಮಾಡಿರಲಿಲ್ಲ. ಕಟೌಟ್ ಅನ್ನು ಎತ್ತಿ ನಿಲ್ಲಿಸುವ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದು, ಕಟೌಟ್ ಕಬ್ಬಿಣದ ಸರಳನ್ನು ಹೊಂದಿದ್ದರಿಂದ ವಿದ್ಯುತ್ ಪ್ರವಹಿಸಿದ್ದು ಕಟೌಟ್ ನಿಲ್ಲಿಸುತ್ತಿದ್ದ ಆರು ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ ಕುಮಾರ್, ಮಣಿಕಂಠ, ಶಿವು ಅವರು ಗಂಭೀರ ಗಾಯಗೊಂಡಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ನಿವಾಸಿಗಳು ಗಂಭೀರ ಗಾಯಗೊಂಡವನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಮಣಿಕಂಠ ಮಾರ್ಗ ಮಧ್ಯೆ ಸಾವನ್ನಪ್ಪಿದರೆ, ಶಿವು, ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದ್ದು, ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಂತಾಪ ಸೂಚಿಸಿದ್ದಾರೆ. ಅನಿರೀಕ್ಷಿತ ಘಟನೆಯಿಂದ ಕ್ಯಾತಮಾರನಹಳ್ಳಿಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ರೋಧನ ಮುಗಿಲು ಮುಟ್ಟಿದೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.