ಮೈಸೂರು: ರಾತ್ರಿ ವಾಕಿಂಗ್ ಮಾಡುವಾಗ ರಸ್ತೆಯಲ್ಲಿ ಸಿಕ್ಕ ಚಿನ್ನದ ಸರದ ಪರ್ಸ್ ನ್ನು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ತೊರಿದ ಘಟನೆ ನಗರದ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟಿ.ಕೆ.ಲೇಔಟ್ ನಿವಾಸಿ ಸಿವಿಲ್ ಕಂಟ್ರಾಕ್ಟರ್ ಸಾದಿಕ್ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಗುರುವಾರ ರಾತ್ರಿ 10 ಗಂಟೆಯವರೆಗೂ ವಾಕಿಂಗ್ ಮಾಡುತ್ತಿದ್ದರು. ಅಲ್ಲೆ ಪಕ್ಕದಲ್ಲಿರುವ ಗುರುರಾಘವೇಂದ್ರ ಸಭಾಭವನದಲ್ಲಿ ರಾಮಾನುಜ ರಸ್ತೆಯಲ್ಲಿರುವ ಕುಟುಂಬದ ಅನಿತಾ ಎಂಬವರ ವಿವಾಹ ಶರತ್ ಎಂಬವರ ಜೊತೆ ಶುಕ್ರವಾರ ನಿಶ್ಚಯವಾಗಿತ್ತು.
ಅದರಿಂದ ಅನಿತಾ ಮನೆಯವರು ಮನೆಯಿಂದ ಸಭಾಭವನಕ್ಕೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳನ್ನು ತಮ್ಮ ಕಾರಿನಲ್ಲಿ ತಂದಿಳಿಸುತ್ತಿದ್ದರು. ಹೀಗೆ ಹಲವು ಸಲ ಆಚೆ ಈಚೆ ಓಡಾಡಿದಾಗ ಅವರ ಕಾರಿನಲ್ಲಿದ್ದ 90ಗ್ರಾಂ ಚಿನ್ನದ ಸರ, ಮೂರುವರೆ ಸಾವಿರ ನಗದು ಇರುವ ಪರ್ಸ್ ಬಿದ್ದಿತ್ತು. ಆ ಪರ್ಸ್ ವಾಕಿಂಗ್ ಮಾಡುತ್ತಿದ್ದ ಸಾದಿಕ್ ಅವರಿಗೆ ದೊರಕಿತು. ಅವರು ಅದನ್ನು ಕೊಂಡೊಯ್ದು ಸರಸ್ವತಿಪುರಂ ಪೊಲೀಸ್ ಠಾಣೆಗೆ ನೀಡಿದ್ದಾರೆ.
ಪರ್ಸ್ ನಲ್ಲಿ ಅವರು ಬಂಗಾರದ ಆಭರಣ ಕೊಂಡ ಮಳಿಗೆಯ ರಸೀದಿಯಿತ್ತು. ಬಂಗಾರದ ಆಭರಣದ ಮಳಿಗೆಗೆ ದೂರವಾಣಿ ಕರೆ ಮಾಡಿ ಆಭರಣವನ್ನು ಯಾರು ಖರೀದಿಸಿದ್ದರೆಂಬ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು ವಿವಾಹ ಸ್ಥಳಕ್ಕೆ ತೆರಳಿ ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಅಭಿನಂದನೆ:
ಶುಕ್ರವಾರ ಮದುವೆ ಮುಗಿಸಿ ಬಂದ ವರ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಪೂವಯ್ಯ ಅವರ ಜೊತೆಗೂಡಿ ಠಾಣೆಯಲ್ಲಿ ಸಾಧಿಕ್ ಅವರಿಗೆ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.