ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಅಂದರೆ ಬಹುದೊಡ್ಡ ಗೌರವದ ಹುದ್ದೆ, ಮಹಾನ್ ವ್ಯಕ್ತಿಗಳೆಲ್ಲಾ ಈ ಹುದ್ದೆಯ ಗೌರವ ಹೆಚ್ಚಿಸಿದ್ದಾರೆ. ಆದರೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಸಕಾರಣವಿಲ್ಲದೆ ಮಹಿಳಾ ಹಾಸ್ಟೆಲ್ ಗೆ ಪದೇ ಪದೇ ಭೇಟಿ ಕೊಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ಉನ್ನತ ಶಿಕ್ಷಣ ಸಚಿವರಿಗೂ ದೂರು ಹೋಗಿದೆ. ಹಾಗಾದರೆ ಹಂಗಾಮಿ ಕುಲಪತಿ ಮಹಿಳಾ ಹಾಸ್ಟೆಲ್ ಗೆ ಭೇಟಿ ಕೊಟ್ಟಿದ್ದು ಯಾಕೆ ಅಂತೀರಾ…ಈ ಸ್ಟೋರಿ ಓದಿ.
ಏನಿದು ಘಟನೆ?:
ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ದಯಾನಂದ ಮಾನೆ ಮಾನಸಗಂಗೋತ್ರಿಯ ಮಹಿಳಾ ಹಾಸ್ಟೆಲ್ ವಿನಾಕಾರಣ ಭೇಟಿ ಕೊಟ್ಟು ವಿವಾದಕ್ಕೆ ಸಿಲುಕಿರುವ ವ್ಯಕ್ತಿ. ಹೀಗೆ ವಿವಾದ ಮಾಡಿಕೊಳ್ಳುತ್ತಿರುವುದು ಇವರಿಗೆ ಹೊಸತಲ್ಲ. ಈ ಹಿಂದೆ ಸಂಶೋಧನಾ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ನೀಡಿದಕ್ಕೆ ಪ್ರತಿಯಾಗಿ ವಿದ್ಯಾರ್ಥಿನಿಯ ಸಂಬಂಧಿಕರು ಕ್ಯಾಂಪಸ್ ನಲ್ಲೇ ಮಾನೆ ಅವರನ್ನು ಹಿಡಿದು ಅಟ್ಟಾಡಿಸಿ ಹೊಡೆದಿದ್ದರು.
ಕಳೆದ ವರ್ಷ ಇದು ದೊಡ್ಡ ಸುದ್ದಿಯಾಗಿತ್ತು. ಮತ್ತೊಂದು ಪ್ರಕರಣದಲ್ಲೂ ಇದೇ ರೀತಿ ಲೈಂಗಿಕ ಕಿರುಕುಳ ಕೊಟ್ಟಿದ್ದರ ಬಗ್ಗೆ ಮಹಿಳಾ ದೌರ್ಜನ್ಯ ಸಮಿತಿ ವಿಚಾರಣೆ ನಡೆಸಿ ಇವರ ವಿರುದ್ಧ ವರದಿ ಕೂಡ ನೀಡಿತ್ತು. ಸೇವಾ ಹಿರಿತನ ಆಧಾರದ ಮೇಲೆ ಕಳೆದ ಫೆಬ್ರವರಿಯಲ್ಲಿ ಹಂಗಾಮಿ ಕುಲಪತಿ ಸ್ಥಾನಕ್ಕೇರಿದರೂ ಮಾನೆ ಅವರ ತಿಕ್ಕಲುತನ ಮಾತ್ರ ಕಡಿಮೆಯಾಗಿಲ್ಲ. ವಾರ್ಡನ್ ಅನುಮತಿ ಪಡೆಯದೆ ಪದೇ ಪದೇ ಮಹಿಳಾ ಹಾಸ್ಟೆಲ್ ಹೋಗಿ ವಿದ್ಯಾರ್ಥಿಯರ ಜೊತೆ ಲಲ್ಲೆ ಹೊಡೆದು ಬರುತ್ತಾರೆಂದು ವಾರ್ಡನ್ ಕುಲಸಚಿವರಿಗೆ ದೂರು ನೀಡಿದ್ದಾರೆ. ಹೀಗೆ ಭೇಟಿ ಕೊಟ್ಟದ್ದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ದೃಶ್ಯ ಲಭ್ಯವಾಗಿದೆ.
ವಿದ್ಯಾರ್ಥಿನಿಯರಿಂದ ದೂರು:
ವಿದ್ಯಾರ್ಥಿನಿಯರಿಂದ ದೂರು ಬಂದ ತಕ್ಷಣ ವಿವಿ ರಿಜಿಸ್ಟ್ರಾರ್ ಡಾ. ರಾಜಣ್ಣ ಅವರು ಉನ್ನತ ಶಿಕ್ಷಣ ಸಚಿವ ಬಸವರಾಯ ರಾಯರೆಡ್ಡಿ ಅವರಿಗೆ ಪತ್ರ ಬರೆದಿದ್ದು, ಮಹಿಳಾ ಹಾಸ್ಟೆಲ್ ಗೆ ಈ ತಿಂಗಳಲ್ಲೇ ಕನಿಷ್ಠ ನಾಲ್ಕು ಬಾರಿ ಮಾನೆ ಈ ರೀತಿ ಭೇಟಿ ನೀಡಿದ್ದಾರೆ ಅನ್ನೋದು ಆರೋಪ. 402 ವಿದ್ಯಾರ್ಥಿನಿಯರಿರುವ ಈ ಹಾಸ್ಟೆಲ್ ನಲ್ಲಿ ಈ ಹಿಂದೆ ಆತ್ಮಹತ್ಯೆ ತಪ್ಪಿಸಲು ಫ್ಯಾನ್ ಗಳನ್ನು ತೆಗೆಯಲಾಗಿತ್ತು.
ಆದರೆ ಈಗ ಕೇವಲ 12 ಕೊಠಡಿಗಳಲ್ಲಿ ಮಾತ್ರ ಹಂಗಾಮಿ ಕುಲಪತಿ ವಿಶೇಷ ಕಾಳಜಿ ವಹಿಸಿ ಫ್ಯಾನ್ ಅಳವಡಿಸಿದ್ದಾರೆ. ಹಾಸ್ಟೆಲ್ ಭೇಟಿ ಬಗ್ಗೆ ನನ್ನ ಬಳಿ ದೂರು ಕೊಟ್ಟಿದ್ದಕ್ಕೆ ವಾರ್ಡನ್ ರೇಖಾ ಜಾದವ್ ಅವರನ್ನ ತಕ್ಷಣ ವರ್ಗಾವಣೆ ಮಾಡುವಂತೆ ನನ್ನ ಮೇಲೆ ಒತ್ತಡ ಹಾಕಿದ್ದಾರೆ. ಇದನ್ನ ನಿರಾಕರಿಸಿದ್ದಕ್ಕೆ ನನ್ನ ವಿರುದ್ಧ ಏಕವಚನ ಬಳಕೆ ಮಾಡಿದ್ದಾರೆ ಅಂತಾ ರಿಜಿಸ್ಟ್ರಾರ್ ರಾಜಣ್ಣ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಹಂಗಮಿ ಕುಲಪತ ಹೇಳಿದ್ದೇನು?:
ನನಗೆ ಮೈಸೂರು ವಿವಿಯ ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ನ ಅವ್ಯವಸ್ಥೆ ಬಗ್ಗೆ ದೂರು ಬಂದ ಹಿನ್ನಲ್ಲೆಯಲ್ಲಿ ಪರೀಕ್ಷೆ ಮಾಡಲು ನಾನು ಹೋಗಿರುವುದು ನಿಜ. ಆದರೆ ಅಲ್ಲಿ ಯಾರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲ. ನನಗೆ ಕಳಂಕ ತರಬೇಕೆಂದು ಕೆಲವರು ಪಿತೂರಿ ಮಾಡುತ್ತಿದ್ದು, ಮೈಸೂರು ವಿವಿಯಲ್ಲಿ ಭ್ರಷ್ಟಚಾರ ಹಾಗೂ ಅವ್ಯವಹಾರದಲ್ಲಿ ರಿಜಿಸ್ಟ್ರಾರ್ ಭಾಗಿಯಾಗಿದ್ದಾರೆ ಎಂದು ಸರ್ಕಾರಕ್ಕೆ 7 ಪತ್ರಗಳನ್ನ ಬರೆದಿದ್ದೇನೆ. ಇದರಿಂದ ಈ ರೀತಿ ನನ್ನ ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ನಾಳೆ ಪತ್ರಿಕಾಗೋಷ್ಟಿಯಲ್ಲಿ ಎಲ್ಲವನ್ನೂ ತಿಳಿಸುತ್ತೇನೆ ಎನ್ನುತ್ತಾರೆ ಹಂಗಾಮಿ ಕುಲಪತಿ ಪ್ರೊ.ದಯಾನಂದ್ ಮಾನೆ.
ಒಟ್ಟಾರೆ ಹಂಗಾಮಿ ಕುಲಪತಿಯಾಗಿ ಯಾವ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಅಂತಾನೆ ಗೊತ್ತಿಲ್ಲದಿರುವ ಇಂತಹವರನ್ನ ಆ ಹುದ್ದೆಗೆ ಕೂರಿಸಿದ್ದು ವಿಶ್ವವಿದ್ಯಾನಿಲಯದ ಗೌರವ ಹಾಳಾಗಲು ಕಾರಣವಾಗಿದೆ. ಇನ್ನಾದರೂ ಇಂತಹ ತಿಕ್ಕಲುತನದ ವ್ಯಕ್ತಿಗಳನ್ನ ಹುದ್ದೆಯಿಂದ ದೂರ ಇರಿಸುವುದೇ ಒಳ್ಳೆಯದು.