ಮೈಸೂರು: ಮೈಸೂರಿನ ವ್ಯಕ್ತಿಯೋರ್ವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ತಿಳಿಸಿದ್ದರು. ಹಣಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರ ಮೊರೆ ಹೋಗಿದ್ದರು. ಇದೀಗ ಪ್ರತಾಪ್ ಸಿಂಹ, ಪ್ರಧಾನಮಂತ್ರಿಯವರ ಪರಿಹಾರ ನಿಧಿಯಿಂದ ಬಿಡುಗಡೆಯಾದ 1,12,811 ರೂ. ಮೊತ್ತದ ಡಿಡಿಯನ್ನು ಬಡ ಕುಟುಂಬಕ್ಕೆ ನೀಡಿ ನೆರವಾಗಿದ್ದಾರೆ.
ಎನ್.ಆರ್.ಮೊಹಲ್ಲಾ, ಶಿವಾಜಿ ರಸ್ತೆ, 2ನೇ ಕ್ರಾಸ್, 2ನೇ ಹಂತದ ಮನೆ ನಂ4687ರ ನಿವಾಸಿ ಮಂಜುನಾಥ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯ ವೈದ್ಯರು ಆದಷ್ಟು ಬೇಗ ಕಿಡ್ನಿ ಕಸಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅದಕ್ಕೆ ಪೂರಕವಾಗಿ ರೋಗಿಯ ತಾಯಿ ಶಿವಮ್ಮ ಕಿಡ್ನಿಯನ್ನು ದಾನ ಮಾಡಲು ಒಪ್ಪಿಕೊಂಡು, ಪರಸ್ಪರ ತೀರ್ಮಾನಿಸಿ ಶಸ್ತ್ರ ಚಿಕಿತ್ಸೆಗೆ ಸಿದ್ದರಾದರು. ಆದರೆ ಹಣಕಾಸಿನ ಅಭಾವದಿಂದ ಹಾಗೂ ಬಡವರಾಗಿದ್ದರಿಂದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಲ್ಲಿ ಮೊರೆಹೋಗಿದ್ದರು.
ಇದಕ್ಕೆ ಕೂಡಲೇ ಸ್ಪಂದಿಸಿದ ಸಂಸದರು ಅವರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಡಿ ಭರಿಸುವ ವ್ಯವಸ್ಥೆ ಮಾಡಿದರು. ಜೆಎಸ್ಎಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಚಿಕಿತ್ಸೆಗೆ ಸ್ಪಂದಿಸಿದ ಮಂಜುನಾಥ್ ಗುಣಮುಖರಾಗಿದ್ದಾರೆ.