ಮೈಸೂರು: ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡ ಸ್ಥಳದ ಸುತ್ತಲೂ ಮರಗಳು ಹಸಿರಾಗಿರುವುದರಿಂದ ಇದೊಂದು ಮಾನವ ಕೃತ್ಯ ಎಂದು ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದ್ದು, ಈ ಹಿನ್ನಲ್ಲೆಯಲ್ಲಿ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕಳೆದ ಭಾನುವಾರ ಮೈಸೂರಿನ ಹೊರಭಾಗದ ಶಾದನಹಳ್ಳಿ ಖಾಸಗಿ ಜಮೀನಿನಲ್ಲಿ ಭೂಮಿಯಲ್ಲಿ ಬೆಂಕಿ ರೀತಿಯ ಜ್ವಾಲೆಗೆ ಸಿಲುಕಿ ಬಾಲಕನೊರ್ವ ಮೃತಪಟ್ಟ ಹಿನ್ನಲ್ಲೆಯಲ್ಲಿ ಆ ಪ್ರದೇಶಕ್ಕೆ ಹಿರಿಯ ಭೂವಿಜ್ಞಾನಿಗಳು ತಾಂತ್ರಿಕ ತಜ್ಞರ ತಂಡ ಬಂದು ಪರಿಶೀಲನೆ ನಡೆಸಿದ್ದು, ಆ ಸ್ಥಳದ ಸುತ್ತ ರಾಸಾಯನಿಕ ಕ್ರಿಯೆಯ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಬೆಂಕಿ ಬಂದ ಸ್ಥಳದಲ್ಲಿ ಇದ್ದಿಲು ಮಾದರಿಯ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿದ್ದು, ಮೇಲ್ಬಾಗದಲ್ಲಿ ಮರಳು ಸುರಿದು ಮುಚ್ಚಿ ಇದೊಂದು ಮಾನವ ಕೃತ್ಯ ಎಂದು ಕೈಗಾರಿಕಾ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ಧೇಶಕರು ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಸುತ್ತಲು ಹಸಿರು: ಭೂಮಿಯಲ್ಲಿ ಬೆಂಕಿಯ ಜ್ವಾಲೆಯ ರೀತಿ ಕಾಣಿಸಿಕೊಂಡ ಒಂದು ಕುಂಟೆ ಜಾಗದಲ್ಲಿ ಇರುವ ಮರಳಿನಲ್ಲಿ ಮಾತ್ರ ಈ ರೀತಿ ಬೆಂಕಿ ಕಾಣಿಸಿಕೊಂಡಿದ್ದು ಸುತ್ತಲು ಇರುವ ಗಿಡ ಮರಳು ಹಸಿರಾಗಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಸಮಿತಿ ಸದಸ್ಯ ಡಾ.ಜಯಪ್ರಕಾಶ ನೇತೃತ್ವದಲ್ಲಿ ಇಂದು ವರದಿಯನ್ನ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದು, ಸುತ್ತಲಿನ ಸ್ಥಳ ಹಾಗೂ ಬೆಂಕಿ ಕಾಣಿಸಿಕೊಂಡ ಸ್ಥಳದ ಮಾದರಿಗಳನ್ನ ಪರಿಶೀಲನೆ ಮಾಡಿದ್ದು, ಇಲ್ಲಿ ಯಾವುದೇ ರಾಸಾಯನಿಕ ನುಕ್ಲೀಯರ್ ತರಹದ ವಸ್ತುಗಳು ಪತ್ತೆಯಾಗಿಲ್ಲ ಎಂದು ದೃಡ ಪಟ್ಟಿದೆ ಎನ್ನಲಾಗಿದೆ.
ನಿಷೇಧಿತ ಪ್ರದೇಶ: ಶಾದನಹಳ್ಳಿಯ ಬೆಂಕಿ ಕಾಣಿಸಿಕೊಂಡ ಈ ಪ್ರದೇಶದ ಸುತ್ತ 200 ಮೀಟರ್ ಸ್ಥಳವನ್ನ ನಿಷೇದಿತ ಪ್ರದೇಶ ಎಂದು ಒಂದು ತಿಂಗಳುಗಳ ಕಾಲ ಘೋಷಣೆಯಾದ ಹಿನ್ನಲ್ಲೆಯಲ್ಲಿ ಆ ಸ್ಥಳದಲ್ಲಿ ಅಪಾಯಕಾರಿ ಪ್ರದೇಶ, ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ನಾಮಫಲಕವನ್ನ ಹಾಕಲಾಗಿದೆ.