ಮೈಸೂರು: ನಗರದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕು.ಅನುಷಾ.ಜಿ, ಅವರು ಇತ್ತೀಚಿಗೆ ಪ್ರಕಟಗೊಂಡ ಕೆಪಿಎಸ್ಸಿ ಆಯ್ಕೆ ಪಟ್ಟಿಯಲ್ಲಿ ರಾಜ್ಯಕ್ಕೆ 12ನೇ ರ್ಯಾಂಕ್ ಪಡೆದಿದ್ದು, ಪೊಲೀಸ್ ಇಲಾಖೆಯಲ್ಲಿ ಮುಂದುವರೆಯುವ ಆಸಕ್ತಿ ಹೊಂದಿರುವುದರಿಂದ ಡಿವೈಎಸ್ಪಿ ಹುದ್ದೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಅನುಷಾ ಅವರು, 2015ನೇ ಸಾಲಿನಲ್ಲಿ ಸಿವಿಲ್ ಪಿಎಸ್ಐ ಆಗಿ ನೇಮಕಗೊಂಡು ಒಂದು ವರ್ಷ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಬುನಾದಿ ತರಬೇತಿ ಪಡೆದುಕೊಂಡು 2016 ರಿಂದ ಮೈಸೂರು ನಗರದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಪಿಎಸ್ಐ ಆಗಿ ಕರ್ತವ್ಯ ಆರಂಭಿಸಿದ್ದರು. ಮೂಲತ: ಬೆಂಗಳೂರು ನಗರದವರಾಗಿದ್ದು ಗಣೇಶ್ ಮತ್ತು ಕುಸುಮಾ ದಂಪತಿ ಪುತ್ರಿಯಾಗಿದ್ದಾಳೆ. ಗಣೇಶ್ ಅವರು ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ, ಸಹೋದರ ಅಜಯ್ ರೆವಿನ್ಯೂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು ವಿಶ್ವ ವಿದ್ಯಾನಿಲಯದ ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿಯನ್ನು ಮೊದಲನೇ ರ್ಯಾಂಕ್ ನಲ್ಲಿ ಉತ್ತೀರ್ಣರಾಗಿದ್ದು, ಎಂಟು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ನಂತರ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಪಬ್ಲಿಕ್ ಅಡ್ಮಿನಿಷ್ಟ್ರೇಷನ್ ವಿಷಯದಲ್ಲಿ ಎಂಎ ಪದವಿ ಪಡೆದಿರುತ್ತಾರೆ. ಟೆಕ್ವಾಂಡೋ (ಮಾರ್ಷಲ್ ಆರ್ಟ್ )ನಲ್ಲಿ ಬ್ಲಾಕ್ಬೆಲ್ಟ್ ಪಡೆದಿದ್ದು, 2007ರಲ್ಲಿ ನ್ಯಾಷನಲ್ ಗೇಮ್ಸ್ ಗೌಹಾಟಿಯಲ್ಲಿ ಸಿಲ್ವರ್ ಮೆಡಲ್ ಪಡೆದಿರುತ್ತಾರೆ. ಪೊಲೀಸ್ ಇಲಾಖೆಯಲ್ಲಿನ ಕೆಲಸದ ಒತ್ತಡದ ನಡುವೆಯೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವುದು ವಿಶೇಷವಾಗಿದೆ.