ಮೈಸೂರು: ಪ್ರಸ್ತುತ ದಿನಗಳಲ್ಲಿ ಯುವ ಸಮುದಾಯ ರಾಜಕೀಯದಲ್ಲಿ ಆಸಕ್ತಿ ವಹಿಸುತ್ತಿದ್ದು, ಅವರನ್ನು ಸೆಳಯುವತ್ತ ಕಾರ್ಯ ಪ್ರವೃತ್ತರಾಗಬೇಕೆಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ನಗರ ಮುಡಾ ಎದುರಿನ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮೈಸೂರು ಗ್ರಾಮಾಂತರ ಜಿಲ್ಲಾ ವೃತ್ತಿ ನಿರತ ( ಪ್ರೊಪೆಷನಲ್ ಸೆಲ್) ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿ ಪ್ರೊಫೆಷನಲ್ ಸೆಲ್ ಹುದ್ದೆಗಳಿಗೆ ಬರುತ್ತಾರೆ. ಕಾಂಗ್ರೆಸ್ ಚಳವಳಿಗಳಲ್ಲಿ ಹೆಚ್ಚು ವಿದ್ಯಾರ್ಥಿಗಳೇ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರಗತಿಪರ ಸಂವಿಧಾನದ ಮೌಲ್ಯಗಳಿರುವ ದಿಕ್ಕಿನಲ್ಲಿ ಸಾಗಬೇಕು ಎಂದರು.
2014ರ ಲೋಕಸಭೆ ಚುನಾಚಣೆಯಲ್ಲಿ 39 ಲಕ್ಷ ಯುವಕರು ಬಿಜೆಪಿಗೆ ಮತ ಹಾಕಿದ್ದು, ಪಕ್ಷಕ್ಕಾಗಿ ಮತ ಹಾಕಿಲ್ಲ ಬದಲಿಗೆ ನರೇಂದ್ರ ಮೋದಿ ಅವರನ್ನು ನೋಡಿ ಮತ ಹಾಕಿದ್ದಾರೆ. ಐಟಿಬಿಟಿಯಲ್ಲಿ ಉದ್ಯೋಗದಲ್ಲಿ ಯುವಕರೆ ಅಧಿಕ ಸಂಖ್ಯೆಯಲ್ಲಿದ್ದು, ಅವರನ್ನು ಸೆಳಯುವ ಪ್ರಯತ್ನ ಮಾಡಬೇಕು ಎಂದರು.
ನಮ್ಮ ಪಕ್ಷ ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾವು ಹೃದಯವಂತಿಕೆಯಿಂದ ಒಪ್ಪಿಕೊಳ್ಳುತ್ತೇವೆ. ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನ-ಮಾನ ಕೊಡುವುದಿಲ್ಲ. ನಮ್ಮ ಪಕ್ಷ ಮಹಿಳೆಯರನ್ನು ಪೂಜಿಸುತ್ತದೆ ಹಾಗೂ ವಿಶಿಷ್ಟ ಸ್ಥಾನ ನೀಡಿದ್ದೇವೆ. ಕಾಂಗ್ರೆಸ್ ಗೆ ಮಹಿಳೆಯರ ಬೆಂಬಲ ಹೆಚ್ಚು ಆವಶ್ಯ. ಮಹಿಳೆಯರನ್ನು ಮನೆಯಿಂದ ಕರೆತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಕೆಪಿಸಿಸಿ ಪ್ರೊಪೆಷನಲ್ ಸೆಲ್ ರಾಜ್ಯಾಧ್ಯಕ್ಷ ನಿಖಲ್ ಕುಮಾರ್ ಅವರ ಆದೇಶ ಮೇರೆಗೆ ಮೈಸೂರು ಗ್ರಾಮಾಂತರ ಜಿಲ್ಲಾ ವೃತ್ತಿ ನಿರತ ಪ್ರೊಪೆಷನಲ್ ಸೆಲ್ ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್ ಪ್ರಶಾಂತ ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರಾಜ್ಯ ಸಮಿತಿಯ ಅಧ್ಯಕ್ಷ ನಿಖಿಲ್ ಕಾರ್ಯಪ್ಪ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಗುರುಪಾದಸ್ವಾಮಿ, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.