ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಕ್ರಮಗಳು ನಡೆದಿದ್ದು, ಆ ಬಗ್ಗೆ ತ್ವರಿತ ತನಿಖೆ ಕೈಗೊಂಡ ನಂತರ 83ನೇ ಅಖಿಲ ಭಾರತ ಕನ್ನಡ ಸಾಹತ್ಯ ಸಮ್ಮೇಳನ ನಡೆಸುವಂತೆ ಸಮಾನ ಮನಸ್ಕರ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಮೈಸೂರು ಕನ್ನಡ ವೇದಿಕೆಯ ನೇತೃತ್ವದಲ್ಲಿ ಮಂಗಳವಾರ ಗನ್ ಹೌಸ್ ಬಳಿಯಿರುವ ವಿಶ್ವಮಾನವ ಉದ್ಯಾನವನದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ನಿರ್ಣಯಿಸಿ ಒಮ್ಮತದ ತೀರ್ಮಾನ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ನಮ್ಮೆಲ್ಲರಿಗೂ ಮತ್ತು ಜಿಲ್ಲೆಗೆ ಹೆಮ್ಮೆಯ ವಿಷಯ. ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿ ಇನ್ನೂ ನಾಲ್ಕು ತಿಂಗಳು ಕಳೆದಿಲ್ಲ. ಅಲ್ಲಿನ ಲೆಕ್ಕ ಪತ್ರಗಳೇ ಇನ್ನೂ ಪೂರ್ಣಗೊಂಡಿಲ್ಲ. ಹೀಗಿರುವಾಗ ಈಗಲೆ ಅಂದರೆ ಕಸಾಪ ಹೇಳುತ್ತಿರುವಂತೆ ಜೂನ್ ತಿಂಗಳಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಖಂಡಿತ ಸರಿಯಲ್ಲ. ವಾಸ್ತವವಾಗಿ ಪರಿಷತ್ತಿನ ಬೈಲಾ ಪ್ರಕಾರ ಒಂದು ವಾರ್ಷಿಕ ಸಮ್ಮೇಳನ. ವರ್ಷ ತುಂಬುವುದರೊಳಗೆ ಎರಡು ಮೂರು ಬಾರಿ ಸಮ್ಮೇಳನ ಮಾಡಿ ಸಾರ್ವಜನಿಕರ ತೆರೆಗೆ ಹಣವಾದ ಕೋಟ್ಯಾಂತರ ರೂಪಾಯಿಗಳನ್ನು ಪೋಲು ಮಾಡುವುದು ಸರಿಯಲ್ಲ ಎಂದರು.
ಜೊತೆಗೆ ಈ ವರ್ಷವೇ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಕೂಡ ಜರುಗುತ್ತಿದೆ. ಇದಕ್ಕಾಗಿ ನಮ್ಮ ಸರ್ಕಾರ 20ಕೋಟಿ ಹಣ ಕೊಡುತ್ತಿದೆ. ಈ ಬಾರಿ ಪ್ರಕೃತಿ ವಿಕೋಪ ಸಹ ಬರದ ರೂಪದಲ್ಲಿ ಜನ, ಜಾನುವಾರು ಹಾಗೂ ರೈತಾಪಿ ಬಂಧುಗಳನ್ನು ಬಸವಳಿಯುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಭಾಷೆ ಮತ್ತು ಸಾಹಿತ್ಯದ ಹೆಸರಿನಲ್ಲಿ ನಾಡಿಗೆ ಹೊರೆಯಾಗುವಂತಹ ಕೆಲಸ ಮಾಡುವುದು ಸಾಹಿತ್ಯ ಪರಿಷತ್ತಿಗೆ ಘನತೆಯೆನಿಸದು ಎಂದು ಹೇಳಿದರು.
ಆದರೆ ಈಗಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕ ಭ್ರಷ್ಟರ ಗುಂಪೊಂದರ ಕಪಿಮುಷ್ಟಿಯಲ್ಲಿದೆ. ಜಿಲ್ಲಾ ಸಮ್ಮೇಳನವನ್ನು ಮಾಡದಿದ್ದರೂ, ದಾಖಲೆಯಲ್ಲಿ ಅದಕ್ಕೆ ಖರ್ಚಿನ ಬಾಬ್ತು ತೋರಿಸಿ ಹಣ ನುಂಗಿದೆ. ಕಸಾಪ ಅದಕ್ಕೆ ಉತ್ತರಿಸಿಲ್ಲ. ಈಗಿನ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪಶುವೈದ್ಯರಾಗಿದ್ದರು ಅದನ್ನು ಕೇವಲ ಪ್ರವೃತ್ತಿ ಮಾಡಿಕೊಂಡು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನವನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿಸಿಕೊಂಡಿದ್ದಾರೆ. ಹಾಗೆ ಹಿಂದಿನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಎಂ.ಚಂದ್ರಶೇಖರ್ ಸೇರಿದಂತೆ ಅನೇಕರಿಂದ ಪರಿಷತ್ತಿಗೆ ಲಕ್ಷಾಂತರ ರೂ. ಬಾಕಿ ಸಂದಾಯವಾಗಬೇಕಿದೆ. ಹಾಗಾಗಿ ಅವರೆಲ್ಲಾ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸುವ ಅರ್ಹತೆಯನ್ನೇ ಕಳೆದುಕೊಂಡು ಕಪ್ಪು ಪಟ್ಟಿಯಲ್ಲಿದ್ದಾರೆ. ಆದರೂ ತೆರೆಮರೆಯಲ್ಲಿದ್ದುಕೊಂಡೇ ಕಸಾಪದಲ್ಲಿ ಅಕ್ರಮಗಳನ್ನು ನಡೆಸುತ್ತಿದ್ದಾರೆ. ಅದರಿಂದ ಪರಿಷತ್ತಿನ ಸಂಪನ್ಮೂಲವೆಲ್ಲಾ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲಾ ಕಸಾಪದಲ್ಲಿ ನಡೆದಿರುವ ಎಲ್ಲ ತೆರನಾದ ಅಕ್ರಮಗಳ ಬಗ್ಗೆ ತ್ವರಿತವಾಗಿ ತನಿಖೆ ನಡೆಸಬೇಕು. ಈ ಎಲ್ಲಾ ಅಕ್ರಮಗಳಲ್ಲಿ ಭಾಗಿಯಾಗಿರುವ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸರ್ಕಾರಿ ಅಧಿಕಾರಿಯಾಗಿದ್ದು ಅವರನ್ನು ಕೂಡಲೇ ಅಮಾನತ್ತಿನಲ್ಲಿಡಲು ಇಲಾಖೆಗೆ ಪತ್ರಬರೆಯಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇಅರಸ್, ಸಾಹಿತಿಗಳಾದ ಡಾ.ಮುನಿವೆಂಕಟಪ್ಪ, ಜೋಗನಹಳ್ಳಿ ಗುರುಮೂರ್ತಿ, ಡಿ.ಎನ್.ಕೃಷ್ಣಮೂರ್ತಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷ ನಾಲಾಬೀದಿ ರವಿ, ಕನ್ನಡ ಚಳವಳಿಗಾರ ಬಿ.ಎ.ಶಿವಶಂಕರ್, ಅಶೋಕಪುರಂ ರೇವಣ್ಣ, ರಾಧಾಕೃಷ್ಣ, ಸಿರಿಗನ್ನಡ ವೇದಿಕೆ ರಾಜ್ಯಉಪಾಧ್ಯಕ್ಷೆ ಸೌಗಂಧಿಕ ಜೋಯಿಸ್, ಅಖಿಲ ಕನ್ನಡ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಮೇಗೌಡ ಸೇರಿದಂತೆ ಹಲವಾರು ಕನ್ನಡ ಅಭಿಮಾನಿಗಳು ಹಾಜರಿದ್ದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.