ಮೈಸೂರು: ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸರ್ಕಾರಿ ಅಧಿಕಾರಿಗಳ ಸಭೆ ನಡೆಸಲು ಅನುಕೂಲವಾಗುವಂತೆ ಸಿದ್ದರಾಮಯ್ಯ ಕಿರಿಯ ಪುತ್ರ ಡಾ.ಯತೀಂದ್ರ ಅವರಿಗೆ ಶಾಸನಾತ್ಮಕ ಸ್ಥಾನ ನೀಡಲು ಸಿಎಂ ಆಸಕ್ತಿ ತೋರಿದ್ದಾರೆ.
ಮೈಸೂರು ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸದಸ್ಯರನ್ನಾಗಿ ಸಿಎಂ ಕಿರಿಯ ಪುತ್ರ ಡಾ.ಯತೀಂದ್ರ ಅವರನ್ನು ನೇಮಿಸಲು ಸಿಎಂ ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದು ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾದಂತಿದೆ. ಯತೀಂದ್ರಗೆ ವರುಣಾ ಕ್ಷೇತ್ರದ ಉಸ್ತುವಾರಿ ನೀಡಿದ್ದು, ಈ ಹಿನ್ನಲೆಯಲ್ಲಿ ಯತೀಂದ್ರ ಸರ್ಕಾರಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಇದು ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿತ್ತು.
ಈ ಹಿನ್ನಲೆಯಲ್ಲಿ ಎಚ್ಚೆತ್ತ ಸಿಎಂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಸರ್ಕಾರಿ ಅಧಿಕಾರಿಗಳ ಸಭೆ ನಡೆಸಲು ಅನುಕೂಲವಾಗುವಂತೆ ಶಾಸನಾತ್ಮಕ ಹುದ್ದೆ ನೀಡಲು ತೀರ್ಮಾನಿಸಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರೀಶಿಲನಾ ಸಭೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಹಾಗೂ ಸಮಿತಿಯ ಸಭೆಯ ಅಜೆಂಡಾದಲ್ಲಿ ಡಾ.ಯತೀಂದ್ರ ಅವರನ್ನು ನಾಮ ನಿರ್ದೇಶನ ಮಾಡುವ ವಿಷಯವನ್ನು ತಿಳಿಸಲಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಗೈರಿನ ಹಿನ್ನಲೆಯಲ್ಲಿ ಈ ವಿಚಾರ ಕೈಬಿಡಲಾಗಿದೆ.
ಈ ಬಗ್ಗೆ ಸಂಸದ ಧ್ರುವನಾರಾಯಣ್ ಮಾತನಾಡಿ, ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಹಾಗೂ ಉಸ್ತುವಾರಿ ಸಮಿತಿಗಳ ಸದಸ್ಯರನ್ನಾಗಿ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನೇಮಕ ಮಾಡುವ ವಿಚಾರ ಸಭೆಯ ಕಾರ್ಯ ಸೂಚಿಯಲ್ಲಿತ್ತು. ಆದರೆ ಉಸ್ತುವಾರಿ ಸಚಿವರ ಗೈರಿನ ಹಿನ್ನಲೆಯಲ್ಲಿ ಮುಂದಿನ ತ್ರೈಮಾಸಿಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯತೀಂದ್ರ ಅವರನ್ನು ಸದಸ್ಯರನ್ನಾಗಿ ನೇಮಿಸಲು ಚಿಂತನೆ ನಡೆದಿದೆ ಎಂದರು.