ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕ್ರಮಗಳಲ್ಲಿ ಅಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಸಚಿವ, ಪರೀಕ್ಷಾಂಗ ಕುಲಸಚಿವ ಹಾಗೂ ಅಧಿಕಾರಿಗಳ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ಕೂಡಲೇ ಸಿಬಿಐ ತನಿಖೆಗೆ ವಹಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ಸುರೇಶ್ ಗೌಡ ಒತ್ತಾಯಿಸಿದರು.
ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಅನೇಕ ಆಕ್ರಮ ನಡೆದಿರುವುದು ಕಂಡು ಬಂದಿದೆ. ಮೈವಿ.ವಿ ಯನ್ನು ಉನ್ನತ ಮಟ್ಟಕ್ಕೆ ತರುತ್ತೇವೆ ಎಂದು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೇಂದ್ರದ ಯುಜಿಸಿಯ ನಿಯಮಾನುಸಾರ 66 ಕೋರ್ಸ್ ಗಳನ್ನು ಒಳಗೊಂಡಂತೆ ಪದವಿ ಮತ್ತು ಸ್ನಾತಕೋತರ ಪದವಿಗಳನ್ನು ಅನುಮತಿಯ ಮೇರೆಗೆ ಆರಂಭಿಸಲಾಯಿತು. ಆದರೆ 2010ರಲ್ಲಿ ರಂಗಪ್ಪ ಕುಲಪತಿಯಾದ ಬಳಿಕ 300ಕ್ಕೂ ಹೆಚ್ಚು ಕೋರ್ಸ್ ಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರಂಭಿಸಿದರು. ಅಲ್ಲದೆ 4000 ಅಧ್ಯಯನ ಕೇಂದ್ರಗಳನ್ನು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ದೆಹಲಿ, ಜಮ್ಮು ಕಾಶ್ಮೀರ, ಇನ್ನಿತರ ರಾಜ್ಯಗಳಲ್ಲಿ ಅನುಮತಿ ಇಲ್ಲದೆ ಅಧ್ಯಯನ ಕೇಂದ್ರಗಳನ್ನು ಆರಂಭಿಸಿ ಯುಜಿಸಿಯ ನಿಯಮಗಳನ್ನು ಉಲ್ಲಂಘಿಸಿದರು. ಇದರಿಂದ ಅನುಮತಿ ರದ್ದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಶಿಸಿ ಹೋಗಿದೆ. ತಮ್ಮ ಲಾಬಿಗಾಗಿ ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುತ್ತಿರುವ ರಂಗಪ್ಪ ಅವರ ಅವಧಿಯಲ್ಲಿ ಆಗಿರುವ ಅಕ್ರಮ ನೇಮಕಾತಿ, ಅಕ್ರಮ ಕಟ್ಟಡ ಕಾಮಗಾರಿಗಳಂತ ಗಂಭೀರ ಪ್ರಕರಣಗಳನ್ನು ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.