ಮೈಸೂರು: ಮನೆ ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳಿಗೆ ಕನ್ನ ಹಾಕುತ್ತಿದ್ದುದಲ್ಲದೆ, ರಿವಾಲ್ವರ್ ತೋರಿಸಿ ಬೆದರಿಸಿ ದರೋಡೆ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಸರಸ್ವತಿಪುರಂ ಠಾಣೆ ಪೊಲೀಸರು ಖದೀಮರಿಂದ ಚಿನ್ನಾಭರಣ, ಮನೆ ಕಳ್ಳತನಕ್ಕೆ ಬಳಸುತ್ತಿದ್ದ ಮಾರಕಾಯುಧಗಳು, ರಿವಾಲ್ವರ್, ಮೊಬೈಲ್, ಕಾರು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ನಿವಾಸಿ ರವಿಚಂದ್ರ ಅಲಿಯಾಸ್ ರವಿ(21), ಮೈಸೂರಿನ ಹೂಟಗಳ್ಳಿಯ ಕೆಹೆಚ್ಬಿ ಕಾಲೋನಿಯ ಮಣಿಕಂಠ ಅಲಿಯಾಸ್ ಮಣಿ(20) ಮತ್ತು ತಮಿಳುನಾಡಿದ ದಿಂಡಿಗಲ್ ನಿವಾಸಿ ಅರುಣ್ ರಾಜ್ ಅಲಿಯಾಸ್ ರಾಜಶೇಖರನ್ (24) ಬಂಧಿತರು.
ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೊದಲಿಗೆ ಸರಸ್ವತಿಪುರಂನಲ್ಲಿರುವ ಮುತ್ತೂಟ್ ಫಿನ್ಕಾರ್ಪ್ ಬಳಿ ರವಿಚಂದ್ರ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಮಣಿಕಂಠನ ಬಗ್ಗೆ ಮಾಹಿತಿ ನೀಡಿದ್ದನು. ಅದರಂತೆ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಿಗೆ ಕನ್ನ ಹಾಕಿದ್ದ ವಿಚಾರ ಬಹಿರಂಗಪಡಿಸಿದ್ದನು. ಹಾಗಾಗಿ ಆರೋಪಿಯಿಂದ 70 ಸಾವಿರ ರೂ ಮೌಲ್ಯದ 16 ಗ್ರಾಂ ತೂಕದ ಚಿನ್ನಾಭರಣಗಳು, 270 ಗಾಂ ತೂಕದ ಬೆಳ್ಳಿಯ ಪದಾರ್ಥಗಳು, ಒಂದು ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ ಹಾಗೂ ಕಳ್ಳತನ ಮಾಡಲು ಉಪಯೋಗಿಸುತ್ತಿದ್ದ ಕಾರು ದೊರಕಿತ್ತು.
ಮಣಿಕಂಠ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮೊಂದಿಗೆ ಇನ್ನಿಬ್ಬರು ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಅದರಲ್ಲಿ ಒಬ್ಬ ತಮಿಳುನಾಡಿನವನಾದ ಅರುಣ್ ರಾಜ್ ಬೆನ್ನತ್ತಿದಾಗ ಆತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಅರ್ಪ್ ಕೊಟ್ಟೈ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಅದರಂತೆ ಅಲ್ಲಿಗೆ ತೆರಳಿದ ಸರಸ್ವತಿಪುರಂ ಠಾಣಾ ಪೊಲೀಸರು ಆತನನ್ನು ಏ.21ರಂದು ತಮ್ಮ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳುವಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ.
ಕಳ್ಳತನ ಮಾಡಲು ಮೈಸೂರಿಗೆ ಬರುತ್ತಿದ್ದ ಅರುಣ್ ರಾಜ್ ನಗರದ ಗಾಂಧಿ ಚೌಕದ ಬಳಿಯಿರುವ ಹೋಟೆಲ್ ಆರ್ ಆರ್ ಹಿಂಭಾಗದಲ್ಲಿರುವ ಜಡ್ಕೆ ರೆಸಿಡೆನ್ಸಿ ಲಾಡ್ಜ್ನಲ್ಲಿ ತನ್ನ ಸಹಚರರ ಜೊತೆ ತಂಗುತ್ತಿದ್ದುದಲ್ಲದೆ, ಕಳ್ಳತನಕ್ಕೆ ಬಳಸುತ್ತಿದ್ದ ಮಾರಕಾಸ್ತ್ರ ಮತ್ತು ಸಾಮಾಗ್ರಿಗಳನ್ನು ಲಾಡ್ಜ್ ನ ಟೆರೆಸ್ ಶೌಚಾಲಯದಲ್ಲಿರುವ ಕಲ್ನಾರ್ ಶೀಟಿನ ಮೇಲ್ಬಾಗದಲ್ಲಿ ಯಾರಿಗೂ ಗೊತ್ತಾಗದಂತೆ ಡ್ರಾಯಿಂಗ್ ಶೀಟ್ ಕಂಟೈನರ್ ನಲ್ಲಿ ಬಚ್ಚಿಡುತ್ತಿದ್ದುದಾಗಿ ತಿಳಿಸಿದ್ದಾನೆ. ಅದರಂತೆ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಅಲ್ಲಿ ಕಬ್ಬಿಣದ ರಾಡುಗಳು, ಗ್ಯಾಸ್ ಕಟ್ಟರ್, ಸ್ಕ್ರೂ ಡ್ರೈವರ್, ಬಟನ್ ಚಾಕು, ಒಂದು ರಿವಾಲ್ವರ್ ಸಿಕ್ಕಿದೆ.
ಅರುಣ್ ರಾಜ್ ಗರ ರಿವಾಲ್ವಾರ್ ನ್ನು ವೇಲೂರಿನ ಶಿವಾ ಎಂಬಾತ ನೀಡಿದ್ದಾಗಿ ತಿಳಿಸಿದ್ದರಿಂದ ಪೊಲೀಸರು ಶಿವ ಹುಡುಕಾಟ ನಡೆಸುತ್ತಿದ್ದಾರೆ. ಈ ರಿವಾಲ್ವರ್ ನ್ನು ಜತೆಗಿಟ್ಟುಕೊಂಡು ಜನರನ್ನು ಬೆದರಿಸಿ ಮನೆ ಕಳ್ಳತನ, ರೈಸ್ ಪುಲ್ಲಿಂಗ್ ದಂಧೆ, ಬ್ಲಾಕ್ ಅಂಡ್ ವೈಟ್ ಮನಿ ದಂಧೆ ಹಾಗೂ ರಾಬರಿ ಮಾಡುತ್ತಿದ್ದರು ಎಂಬುದನ್ನು ಆರೋಪಿಗಳು ತಿಳಿಸಿದ್ದಾರೆ.
ಅರುಣ್ ರಾಜ್ ಕಳ್ಳತನದ ಪ್ರಮುಖನಾಗಿದ್ದು, ಈತ ತನ್ನ ಸಹಚರರಾದ ರವಿಚಂದ್ರ, ಮಣಿಕಂಠ ಜತೆ ಸೇರಿ ಈಗಾಗಲೇ ಕೊಡಗು, ಪುದೂರು, ನಾಗಮಲೈ, ದಿಂಡಿಗಲ್ ಮೊದಲಾದ ಕಡೆಗಳಲ್ಲಿ ಚೀಟಿಂಗ್, ರೈಸ್ ಪುಲ್ಲಿಂಗ್ ದಂಧೆ, ಮನೆಗಳ್ಳತನ, ರಾಬರಿ ಸೇರಿದಂತೆ ಒಟ್ಟು 27 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಅರುಣ್ ರಾಜ್ ಈ ಮೊದಲು ತಮಿಳುನಾಡಿನ ಮಧುರೈ ಜೈಲಿನಲ್ಲಿ 11 ತಿಂಗಳು ಜೈಲ್ ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದನಾದರೂ ಅಲ್ಲಿಂದ ಬಂದು ಮೈಸೂರು ಸುತ್ತಮುತ್ತ ತನ್ನ ಕೃತ್ಯವನ್ನು ಮುಂದುವರೆಸಿದ್ದನು. ಇದೀಗ ಸರಸ್ವತಿಪುರಂ ಪೊಲೀಸರ ಅತಿಥಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಸರಸ್ವತಿಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಸಿ ಪೂವಯ್ಯ, ಸಿಬ್ಬಂದಿ ಆರ್.ಶೈಲೇಶ್, ಕೆ.ಟಿ.ಮಂಜುನಾಥ, ಬಸವರಾಜೆ ಅರಸ್, ಜಿ.ಎಸ್. ಕಾಂತರಾಜು, ಹೆಚ್.ವಿ.ಮಂಜುನಾಥ, ರಾಮಯ್ಯ, ಅರ್ಜುನ್ ಪಾಲ್ಗೊಂಡಿದ್ದರು.