ಮೈಸೂರು: ಬಯಲುಸೀಮೆ ರೈತರನ್ನು ಬರ ಇನ್ನಿಲ್ಲದಂತೆ ಕಾಡಿದೆ. ಬಹಳಷ್ಟು ರೈತರು ನೀರಿನ ಕೊರತೆಯಿಂದಾಗಿ ಈ ಬಾರಿ ಬೆಳೆಯನ್ನೇ ಬೆಳೆದಿಲ್ಲ. ಪರಿಣಾಮ ರೈತರು ಮಾತ್ರ ಕಂಗಾಲಾಗಿಲ್ಲ. ಕೂಲಿ ಕಾರ್ಮಿಕರು ಕೂಡ ಕೆಲಸವಿಲ್ಲದೆ, ಪಟ್ಟಣ ಸೇರಿದಂತೆ ದೂರದ ಊರುಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗಿದ್ದಾರೆ.
ಒಂದು ಊರಿನಿಂದ ಮತ್ತೊಂದು ಊರಿಗೆ ವಲಸೆ ಹೋಗಿ ಬದುಕುವುದು ಎಲ್ಲರಿಗೂ ಸಾಧ್ಯವಾಗಲ್ಲ. ಹೀಗಾಗಿ ಕೆಲವರು ತಮ್ಮ ಊರಿನಲ್ಲೇ ಏನಾದರೊಂದು ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಬಯಲು ಸೀಮೆಯ ಜನರಿಗೆ ಕೆಲಸ ಕೊಟ್ಟಿದ್ದು, ಮತ್ತು ಇತರೆ ಕೃಷಿ ಮಾಡಲಾಗದೆ ಕಂಗಾಲಾದ ರೈತರಿಗೆ ಒಂದಷ್ಟು ಆಸರೆಯಾಗಿರುವುದು ಹುಣಸೆ ಹಣ್ಣು ಮರಗಳು ಎಂದರೆ ತಪ್ಪಾಗಲಾರದು. ಈಗ ಬಹಳಷ್ಟು ಕಡೆಗಳಲ್ಲಿ ಹುಣಸೆ ಮರಗಳಿಂದ ಫಸಲನ್ನು ಕೊಯ್ಲು ಮಾಡುವ ಮತ್ತು ಅದನ್ನು ಸಂಗ್ರಹಿಸಿ ಬಿಡಿಸಿ, ಬೀಜ ತೆಗೆದು ಶುದ್ದೀಕರಿಸುವ ಕೆಲಸ ನಡೆಯುತ್ತಿರುವುದನ್ನು ಬಯಲು ಸೀಮೆಯಲ್ಲಿ ಕಾಣಬಹುದಾಗಿದೆ. ಅದರ ವ್ಯಾಪಾರವೂ ಜೋರಾಗಿಯೇ ನಡೆಯುತ್ತಿರುವುದರಿಂದ ಕೂಲಿ ಕಾರ್ಮಿಕರಿಂದ ಆರಂಭವಾಗಿ ವ್ಯಾಪಾರಸ್ಥರ ತನಕ ಬಿಡುವಿಲ್ಲದ ಕೆಲಸ ಕಂಡು ಬರುತ್ತಿದೆ.
ಈ ಹುಣಸೆ ಹಣ್ಣಿನ ಕೊಯ್ಲಿನಿಂದ ಆರಂಭವಾಗಿ ಸಂಸ್ಕರಣೆ ಕಾರ್ಯದ ತನಕ ಕಳೆದ ಮೂರು ತಿಂಗಳಿನಿಂದ ಇದರ ಕೆಲಸ ನಡೆಯುತ್ತಿದ್ದು, ಇದೀಗ ಮುಗಿಯುವ ಹಂತಕ್ಕೆ ಬಂದಿದೆ. ಹುಣಸೆಯನ್ನು ಅಡುಗೆ, ಔಷಧಿ ಹೀಗೆ ಹಲವು ರೀತಿಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಬೀಜಕ್ಕೂ ಬೇಡಿಕೆಯಿರುವುದನ್ನು ಕಾಣಬಹುದಾಗಿದೆ.ರೈತರು ಇದನ್ನು ಮುಖ್ಯ ಬೆಳೆಯಾಗಿ ಬೆಳೆಯದೆ ತಮ್ಮ ಹೊಲದ ನಡುವೆಯೋ, ಬೇಲಿ ಅಂಚಿನಲ್ಲೋ ನೆಡುತ್ತಾರೆ. ಅದು ಅದರ ಪಾಡಿಗೆ ಬೆಳೆಯುತ್ತಿರುತ್ತದೆ. ಬಹುತೇಕ ಕಡೆ ಇದು ರಸ್ತೆ ಬದಿಯಲ್ಲಿ ನೆರಳಾಗಿಯೂ ಉಪಯೋಗಕ್ಕೆ ಬರುತ್ತಿದೆ. ಮಾಗಡಿ ತಾಲೂಕು ವ್ಯಾಪ್ತಿಯ ಹೆಚ್ಚಿನ ರೈತರಿಗೆ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ಸಹಾಯಕ್ಕೆ ಬಂದಿದೆ. ಬೆಳೆಯಿಲ್ಲದೆ, ಹಣವಿಲ್ಲದೆ ಪರದಾಡುತ್ತಿದ್ದ ಮಂದಿಗೆ ಒಂದಷ್ಟು ಆದಾಯ ತಂದುಕೊಟ್ಟಿದೆ. ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿದ್ದ ಕಾರ್ಮಿಕರಿಗೂ ಕೆಲಸ ದೊರೆಯುವಂತಾಗಿದೆ. ಕೂಲಿ ಕಾರ್ಮಿಕನೊಬ್ಬ ದಿನಕ್ಕೆ ಐದಾರು ಮೂಟೆಯಷ್ಟು ಹುಣಸೆ ಹಣ್ಣನ್ನು ಕೊಯ್ಲು ಮಾಡುತ್ತಿದ್ದು, ಆತನಿಗೆ ಕನಿಷ್ಠ ಆರುನೂರು ಕೂಲಿ ನೀಡಬೇಕಂತೆ. ಇನ್ನು ಅದನ್ನು ಚಚ್ಚಿ ಬಿಡಿಸುವ ಕಾರ್ಮಿಕರಿಗೆ ಕನಿಷ್ಠ ನೂರೈವತ್ತು ರೂಪಾಯಿ ನೀಡಬೇಕಂತೆ. ಹೀಗಾಗಿ ಇದರಿಂದ ಹೆಚ್ಚಿನ ಲಾಭ ನಿರೀಕ್ಷಿಸುವುದು ಅಸಾಧ್ಯ ಎನ್ನುವುದು ವ್ಯಾಪಾರಿಗಳ ಮಾತು.
ಇದರ ನಡುವೆ ಅದನ್ನು ಬೆಳೆದ ರೈತರಿಗೇನು ಅಂಥ ಲಾಭ ಸಿಗಲಾರದು. ಅದರ ಪಾಡಿಗೆ ಬೆಳೆದು ಫಸಲು ನೀಡುತ್ತಿದ್ದು ಅದಕ್ಕಾಗಿ ಪ್ರತ್ಯೇಕ ಖರ್ಚು ಮಾಡುವುದಿಲ್ಲ. ಹಾಗಾಗಿ ಎಷ್ಟು ಆದಾಯ ಬರುತ್ತೋ ಅಷ್ಟು ಬರಲಿ ಸಾಕು ಎನ್ನುವುದು ರೈತರ ಅಭಿಪ್ರಾಯವಾಗಿದೆ. ಹುಣಸೆ ಹಣ್ಣಿಗೆ ರಾಮನಗರ, ತುಮಕೂರು, ಅಲ್ಲದೆ ಬೆಂಗಳೂರಲ್ಲಿ ಮಾರುಕಟ್ಟೆಗಳಿದ್ದು ಇಲ್ಲಿ ತರಾವರಿ ದರವಿರುವುದನ್ನು ಕಾಣಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕಡ್ಡಿ ಹುಣಸೆಗೆ ಕೆಜಿಗೆ 20 ರೂ ಇದ್ದರೆ, ಬಿಡಿಸಿದ ಹುಣಸೆಗೆ 80 ರೂ ನಿಂದ 100 ರೂ. ಇದೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಆಗಾಗ್ಗೆ ಏರುಪೇರಾಗುತ್ತಿರುತ್ತದೆ. ಬಹಳಷ್ಟು ಮಂದಿ ವ್ಯಾಪಾರಸ್ಥರು ಇಡೀ ಮರವನ್ನೇ ಅಂದಾಜು ಲೆಕ್ಕದಲ್ಲಿ ಗುತ್ತಿಗೆ ಪಡೆದು ಕೊಯ್ಲು ಮಾಡಿಸುತ್ತಾರೆ. ಇನ್ನು ಕೆಲವರು ಸಂಸ್ಕರಿಸಿದ ಹುಣಸೆ ಹಣ್ಣನ್ನು ರೈತರಿಂದ ಖರೀದಿಸಿ ಬಳಿಕ ಮಾರುಕಟ್ಟೆಗೆ ಒಯ್ಯುತ್ತಾರೆ. ಒಟ್ಟಾರೆ ಈ ವ್ಯಾಪಾರದಲ್ಲಿ ಅಂತಹ ಲಾಭವೇನು ಇಲ್ಲ ಎಂಬ ಕೊರಗು ಕೆಲವು ವ್ಯಾಪಾರಿಗಳದ್ದಾಗಿದೆ. ಅದು ಏನೇ ಇರಲಿ ಈ ಬಾರಿ ಬರದಲ್ಲಿ ಬೆಂದ ಬಹಳಷ್ಟು ಸಣ್ಣಪುಟ್ಟ ರೈತರಿಗೆ, ಕೂಲಿ ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ಹುಣಸೆ ಹಣ್ಣು ಆಸರೆಯಾಗಿದ್ದಂತು ಸತ್ಯ.