ಮೈಸೂರು: ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಬಾಲಕ ಸಾವು ಪ್ರಕರಣಕ್ಕೆ ಸಂಬಂದಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಮೌಲ್ಯಮಾಪನ ಸಮಿತಿ ಇದೊಂದು ಮಾನವ ಕೃತ್ಯ ಎಂದು ಜಿಲ್ಲಾಧಿಕಾರಿಗಳಿಗೆ ಮದ್ಯಂತರ ವರದಿ ಸಲ್ಲಿಸಿದೆ.
ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಶಾದನಹಳ್ಳಿ ಖಾಸಗಿ ಜಮೀನಿನಲ್ಲಿ ಏಪ್ರಿಲ್ 16 ರಂದು ಹರ್ಷಲ್ ಎಂಬ ಬಾಲಕ ಬೆಂಕಿ ಭೂಮಿಯಲ್ಲಿ ನಿಗೂಡ ರೀತಿಯಲ್ಲಿ ಸಾವ್ನಪ್ಪಿದ್ದು, ಈ ಘಟನೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಮೌಲ್ಯಮಾಪನ ಸಮಿತಿಯ ಬಿ.ಎಸ್ ಜೈ.ಪ್ರಕಾಶ್ ನೇತೃತ್ವದ 10 ಸದಸ್ಯರ ಸಮಿತಿ ಏಪ್ರಿಲ್ 22 ರಂದು ಘಟನೆ ನಡೆದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾದರಿಗಳನ್ನ ಸಂಗ್ರಹಿಸಿ ಪ್ರಯೋಗಲಾಯಕ್ಕೆ ಕಳುಹಿಸಿತ್ತು.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮದ್ಯಂತರ ವರದಿ ಸಲ್ಲಿಸಿದ್ದು ವರದಿಯಲ್ಲಿ, ಇದೊಂದು ಮಾನವ ಕೃತ್ಯ ಎಂದು ಅಭಿಪ್ರಾಯಪಟ್ಟಿದ್ದು, ಬೆಂಕಿ ಕಾಣಿಸಿಕೊಂಡ ಸ್ಥಳದಲ್ಲಿ ಬಾಯ್ಲರ್ ಬೂದಿ ಹಾಗೂ ಮರಳು ಪತ್ತೆಯಾಗಿದೆ. 110 ರಿಂದ 140 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಕಾಣಿಸಿಕೊಂಡ ಸ್ಥಳದ ಸುತ್ತ ಯಾವುದೇ ರಾಸಾಯನಿಕ ವಸ್ತುವಿನ ಫಾಟು ಪತ್ತೆಯಾಗಿಲ್ಲ. ಜಮೀನಿನಲ್ಲಿ ಬೆಳೆದಿರುವ ಪೊದೆಗಳಿಗೆ ಬಿದ್ದ ಬೆಂಕಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಇದು ಬಾಯ್ಲರ್ ಬೂದಿಗೆ ವಿಸ್ತರಿಸಿರುವ ಸಾಧ್ಯತೆ ಇದೆ ಎಂದು ಮದ್ಯಾಂತರ ವರದಿಯಲ್ಲಿ ಉಲ್ಲೇಖಿಸಿದ್ದು, ಪತ್ತೆಯಾದ ಬೂದಿ ರಾಸಾಯನಿಕ ತ್ಯಾಜವೇ ಎಂಬುದನ್ನ ಸ್ಪಷ್ಟಪಡಿಸಿಲ್ಲ.
ಬಾಲಕ ಹರ್ಷಲ್ ನ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಸಮಿತಿ ತಿಳಿಸಿದೆ.