ಮೈಸೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದುವರೆಗೆ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹರ್ಷವನ್ನುಂಟು ಮಾಡಿದೆ. ಇದರ ಜತೆ ಜತೆಯಲ್ಲೇ ಬಿರುಗಾಳಿ, ಆಲಿಕಲ್ಲು ಮಳೆ ಸಹಿತ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಬಹಳಷ್ಟು ರೈತರು ಕಷ್ಟಪಟ್ಟು ಮಾಡಿದ ಕೃಷಿ ನಾಶವಾಗಿದೆ.
ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಹನಗೋಡು ಹೋಬಳಿ ಕೆಲ ಗ್ರಾಮಗಳಲ್ಲಿ ಗುಡುಗು, ಸಿಡಿಲು, ಬಿರುಗಾಳಿಯಿಂದ ಕೂಡಿದ ಆಲಿಕಲ್ಲು ಸಹಿತ ಮಳೆಯಾಗಿರುವ ಕಾರಣದಿಂದಾಗಿ ಇಲ್ಲಿನ ರೈತರು ಕಷ್ಟ ಪಟ್ಟು ಮಾಡಿದ್ದ ಕೃಷಿ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಹನಗೋಡು ಸೇರಿದಂತೆ ಈ ಭಾಗದ ಉಡುವೇಪುರ, ಕಾಳಬೋಚನಹಳ್ಳಿ, ಅಯ್ಯನಕೆರೆ, ಕಚುವಿನಹಳ್ಳಿ, ಅಬ್ಬೂರು, ಕಡೇಮನುಗನಹಳ್ಳಿ, ನೇರಳಕುಪ್ಪೆ, ಬೀಲ್ಲೇನಹೊಸಹಳ್ಳಿ, ಬಿ.ಆರ್ ಕಾವಲ್ ಮೊದಲಾದ ಗ್ರಾಮಗಳಲ್ಲಿ ರೈತರು ಶುಂಠಿ, ಮೆಣಸು, ಸೇರಿದಂತೆ ಹಲವು ಬೆಳೆಬೆಳೆದಿದ್ದರಾದರೂ ಅವುಗಳೆಲ್ಲ ನೀರಲ್ಲಿ ಕೊಚ್ಚಿ ಹೋಗಿದೆ. ಇನ್ನು ಕಲ್ಲಿನಾಕಾರದ ಆಲಿಕಲ್ಲುಗಳು ಬಿದ್ದ ಪರಿಣಾಮ ಇತರೆ ಕೃಷಿ ಫಸಲು ನಾಶವಾಗಿದೆ.
ಗ್ರಾಮಗಳಲ್ಲಿದ್ದ ಸಣ್ಣಪುಟ್ಟ ಕೆರೆ ಕಟ್ಟೆಗಳಲ್ಲಿ ನೀರು ತುಂಬಿದ್ದರಿಂದ ಜಾನುವಾರುಗಳಿಗೆ ನೀರು ಸಿಕ್ಕಂತಾಗಿದೆ. ಬಿಸಿಲಿನಿಂದ ಎಲ್ಲ ಒಣಗಿ ಹೋಗಿತ್ತಾದರೂ ಇದೀಗ ಮಳೆಯಿಂದ ಎಲ್ಲವೂ ನಳನಳಿಸುವಂತಾಗಿದೆ.
ಉಡುವೇಪುರ ಗ್ರಾಮದಲ್ಲಿ ಬಿರುಗಾಳಿಯ ಹೊಡೆತಕ್ಕೆ ಏಲಕ್ಕಿಗೌಡ, ರಾಮೆಗೌಡ, ಲಕ್ಕೇಗೌಡ, ಕುಮಾರ, ಭಾಗ್ಯಮ್ಮ ಎಂಬುವರ ಮನೆಯ ಮೇಲ್ಛಾವಣಿ ಹೆಂಚು ಹಾಗೂ ಶೀಟುಗಳು ಹಾರಿಹೋಗಿವೆ, ಅಯ್ಯನಕೆರೆ ಗಿರಿಜನ ಹಾಡಿಯಲ್ಲಿ ಪೊನ್ನಪ್ಪ ಎಂಬುವರ ವಾಸದ ಮನೆ ಮೇಲೆ ಮರವೊಂದು ಬಿದ್ದು ಜಖಂ ಆಗಿದೆ. ಕಳಬೋಚನಹಳ್ಳಿ ಗ್ರಾಮದ ದಿವಂಗತ ಹುಚ್ಚೇಗೌಡ ಪತ್ನಿ ಜಯಮ್ಮರಿಗೆ ಸೇರಿದ ಒಂದು ಎಕರೆ ಶುಂಠಿ ಬೆಳೆ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋದರೆ, ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಗಿಡಗಳು ನಾಶವಾಗಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಹಾಗೂ ಹುಣಸೂರು ವಲಯದ ಭೀಮನಕಟ್ಟೆ, ಅಯ್ಯನಕೆರೆ, ಬಿಲ್ಲೆನಹೊಸಹಳ್ಳಿ ಭಾಗದ ಅರಣ್ಯ ಪ್ರದೇಶಕ್ಕೂ ಉತ್ತಮ ಮಳೆಯಾಗಿದೆ. ಮಳೆಯಿಂದ ಒಂದಡೆ ಅನುಕೂಲವಾಗಿದ್ದರೆ, ಮತ್ತೊಂದೆಡೆ ಹಾನಿಯೂ ಆಗಿದೆ. ಮಳೆ ಹೀಗೆಯೇ ಮುಂದುವರೆದರೆ ಈ ಬಾರಿ ಬರದಿಂದ ಹೊರಬಂದು ಬೆಳೆ ಬೆಳೆಯಬಹುದು ಎಂಬುದು ರೈತರ ಆಲೋಚನೆಯಾಗಿದೆ.