ಮೈಸೂರು: ಸರ್ಕಾರ ರಾಜ್ಯದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿ, ಜನಸ್ನೇಹಿ ಮಾಡಿದ್ದು ಹಲವು ಬದಲಾವಣೆಗಳೊಂದಿಗೆ ಸುಧಾರಿತ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಅದನ್ನು ಮೈಸೂರು ಜಿಲ್ಲೆಯಲ್ಲಿ ತತ್ಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ಎಸ್ಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.
ನೂತನವಾಗಿ ಅಳವಡಿಸಿರುವ ಬೀಟ್ನಲ್ಲಿ ಹಲವು ಬದಲಾವಣೆಯನ್ನು ಗಮನಿಸಬಹುದಾಗಿದೆ. ಇನ್ಮುಂದೆ ಠಾಣೆಯಲ್ಲಿರುವ ಎಲ್ಲಾ ಪೇದೆ ಹಾಗೂ ಮುಖ್ಯಪೇದೆಗಳಗೆ ಠಾಣಾ ವ್ಯಾಪ್ತಿಯ ಗ್ರಾಮಗಳನ್ನು ವಿಂಗಡಣೆ ಮಾಡಲಾಗುತ್ತಿದ್ದು, ಪ್ರದೇಶಕೊಬ್ಬ ಪೊಲೀಸ್ ತತ್ವದಡಿಯಲ್ಲಿ ಬೀಟ್ಗೆ ನೇಮಿಸಲ್ಪಟ್ಟ ಪೇದೆ ಹಾಗೂ ಮುಖ್ಯಪೇದೆಗೆ ಬೀಟ್ನ ಜವ್ದಾರಿಯಿರುತ್ತದೆ. ಬೀಟ್ ಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳನ್ನು ಪ್ರತಿ ವರ್ಷಕ್ಕೊಮ್ಮೆ ಬದಲಾವಣೆ ಮಾಡಲಾಗುತ್ತದೆ. ಠಾಣೆಯಲ್ಲಿ ಇತರೆ ಕರ್ತವ್ಯಗಳನ್ನು ನಿರ್ವಹಿಸುವ ಠಾಣಾ ಬರಹಗಾರರು, ತನಿಖಾ ಸಹಾಯಕರು, ನ್ಯಾಯಾಲಯದ ಕರ್ತವ್ಯ, ಗುಪ್ತ ಮಾಹಿತಿ ಸಿಬ್ಬಂದಿ ಕೂಡ ಬೀಟ್ ಮಾಡುವುದು ಅನಿವಾರ್ಯ.
ಜನಸ್ನೇಹಿ ಪೊಲೀಸ್ ತತ್ವದಡಿಯಲ್ಲಿ ಬೀಟ್ ಗೆ ನೇಮಕಗೊಂಡ ಪೊಲೀಸ್ ಸಿಬ್ಬಂದಿ ಬೀಟ್ ಗ್ರಾಮಗಳಲ್ಲಿ ಅರ್ಜಿ ವಿಚಾರಣೆ, ವಾರೆಂಟ್, ಸಮನ್ಸ್ ಜಾರಿ, ಅಕ್ರಮ ಚಟುವಟಿಕೆಗಳ ಬಗ್ಗೆ, ಗುಪ್ತ ಮಾಹಿತಿ ಸಂಗ್ರಹಣೆ, ಗನ್ಲೈಸೆನ್ಸ್, ಅಪರಾಧ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ದಲಿತ ಬೀದಿಗಳಿಗೆ ಭೇಟಿ ನೀಡಿ ದಲಿತ ಸಭೆ ನಡೆಸುವುದು ಮತ್ತು ಗ್ರಾಮದ ಕುಂದು ಕೊರತೆ ಬಗ್ಗೆ ಮಾಹಿತಿ ಸಂಗ್ರಹಿಸ ಬೇಕಾಗುತ್ತದೆ. ಸಾರ್ವಜನಿಕರು ಮತ್ತು ಠಾಣೆಯ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಇದರಿಂದಾಗಿ ಸದರಿ ಗ್ರಾಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹಾಗೂ ಇತರೆ ಮಾಹಿತಿಗಳ ಬಗ್ಗೆ ಶೀಘ್ರವಾಗಿ ಠಾಣೆ ಹಾಗೂ ಮೇಲಾಧಿಕಾರಿಗಳಿಗೆ ರವಾನೆಯಾಗಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲು ಜತೆಗೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಮೂಡಲು ಸಹಕಾರಿಯಾಗಲಿದೆ.
ಪ್ರತಿ ಬೀಟ್ ಸಿಬ್ಬಂದಿ ತಮಗೆ ವಹಿಸುವ ಪೊಲೀಸ್ ಕರ್ತವ್ಯಗಳ ನಿರ್ವಹಣೆಗಾಗಿ ಬೀಟ್ಗೆ ಭೇಟಿ ನೀಡವುದರ ಜೊತೆ ಪ್ರತ್ಯೇಕವಾಗಿ ಪೊಲೀಸ್ ಠಾಣಾಧಿಕಾರಿಯು ತಿಂಗಳಿಗೆ ಕನಿಷ್ಟ ಎರಡು ಬಾರಿ ಬೀಟ್ ನಿರ್ವಹಣೆ ಮಾಡಬೇಕು. ಠಾಣೆಯ ಎ.ಎಸ್.ಐ ಬೀಟ್ ಸಿಬ್ಬಂದಿ ಹಾಗೂ ಗ್ರಾಮ, ಪ್ರದೇಶದಿಂದ ಸೂಕ್ತವೆನಿಸುವಷ್ಟು ನಾಗರಿಕ ಸಮಿತಿ ಸದಸ್ಯರುಗಳನ್ನು ಸಿಬ್ಬಂದಿ ಜೊತೆಗೂಡಿ ಆಯ್ಕೆ ಮಾಡಲಾಗುವುದು. ತಿಂಗಳಿಗೊಮ್ಮೆ ಸಭೆಗಳನ್ನು ಆಯೋಜಿಸಿ ಸಭೆಯ ಕುರಿತು ಮಾಹಿತಿಯನ್ನು ಬೀಟ್ ಪುಸ್ತಕದಲ್ಲಿ ನಮೂದಿಸಬೇಕು. ಇದರಿಂದ ನಿರಂತರವಾಗಿ ಬೀಟ್ ನಿರ್ವಹಣೆಯಾಗುತ್ತಿರುವ ಬಗ್ಗೆ ಹಾಗೂ ಗ್ರಾಮದ ಕುಂದು ಕೊರತೆಗಳ ನಿವಾರಣೆ ಮಾಡಲು ಸಾಧ್ಯವಾಗುತ್ತದೆ.
ವಿಶೇಷ ಸಂದರ್ಭಗಳಲ್ಲಿ ರಾತ್ರಿ ಬೀಟ್ನ ವೇಳೆ, ಕಾನೂನು ಸುವ್ಯವಸ್ಥೆಯ ಸಂದರ್ಭ, ನೈಸಗರ್ಿಕ ದುರಂತ ಪರಿಹಾರ ಕಾರ್ಯಗಳ ಸಂದರ್ಭಗಳಲ್ಲಿ ಠಾಣಾಧಿಕಾರಿಯು ಎರಡಕ್ಕಿಂತ ಹೆಚ್ಚಿನ ಸಿಬ್ಬಂದಿ ಒಟ್ಟುಗೂಡಿಸಿ ಬೀಟ್ ನಿರ್ವಹಣೆಯನ್ನು ಮಾಡಲಾಗುತ್ತದೆ. ಬೀಟ್ ಸಿಬ್ಬಂದಿ ಮತ್ತು ನಾಗರಿಕ ಸಮಿತಿ ಸದಸ್ಯರು ಸೇರಿ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. ಸದರಿ ತಂಡವು ಪ್ರತ್ಯೇಕವಾಗಿ ಮಾಸಿಕ ಸಭೆಗಳನ್ನು ಆಯೋಜಿಸಬೇಕು. ಈ ಸಭೆಗೆ ಎ.ಎಸ್.ಐ, ಠಾಣಾಧಿಕಾರಿ ಹಾಜರಾಗಿ ಸಭೆಯ ನಡಾವಳಿಗಳನ್ನು ಬೀಟ್ ಪುಸ್ತಕದಲ್ಲಿ ನಮೂದಿಸಬೇಕು. ಪೊಲೀಸ್ ಠಾಣೆಯಲ್ಲಿ ಲಭ್ಯವಿರುವ ಎ.ಎಸ್.ಐ ಅವರ ಸಂಖ್ಯೆಗೆ ಅನುಗಣವಾಗಿ ಬೀಟ್ಗಳನ್ನು ವಿಂಗಡಿಸಿ ಸ್ಥಾಯಿ ಆದೇಶ ಸಂಖ್ಯೆ 986 ರಂತೆ ಬೀಟ್ ನಿರ್ವಹಣೆಯ ಉಸ್ತುವಾರಿಯನ್ನು ಎ.ಎಸ್.ಐ ಅವರುಗಳಿಗೆ ನೀಡಲಾಗಿದ್ದು, ಠಾಣಾ ಮಟ್ಟದಲ್ಲಿ ಠಾಣಾಧಿಕಾರಿಯು ಬೀಟ್ ನಿರ್ವಹಣೆಯಾಗುತ್ತಿರುವ ಬಗ್ಗೆ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.
ಸಿಬ್ಬಂದಿ ಸಮರ್ಪಕವಾಗಿ ಬೀಟ್ ನಿರ್ವಹಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಪಿ.ಎಸ್.ಐ ರವರು ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದು, ಸಿಪಿಐ ಹಾಗೂ ಡಿ.ಎಸ್.ಪಿ ಅವರುಗಳು ಠಾಣಾ ಭೇಟಿಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಸುಧಾರಿತ ಬೀಟ್ ವ್ಯವಸ್ಥೆಯ ರಚನೆ ಕಾರ್ಯನಿರ್ವಹಣೆಯ ಬಗ್ಗೆ ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬುನಾದಿ ತರಬೇತಿಯ ಸಂದರ್ಭದಲ್ಲಿ ಮತ್ತು ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಣೆಯ ವೇಳೆಯು ನಿಯಮಿತವಾಗಿ ತರಬೇತಿಯನ್ನು ಆಯೋಜಿಸಿ ಸುಧಾರಿತ ಬೀಟ್ ವ್ಯವಸ್ಥೆಯ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಅರಿವು ಮೂಡಿಸಲಾಗುತ್ತದೆ.
ಪ್ರತಿ ಠಾಣೆಯಲ್ಲಿಯೂ ಬೀಟ್ ನಕ್ಷೆ, ಬೀಟ್ಗೆ ಸಂಬಂಧಪಟ್ಟ ಗ್ರಾಮಗಳು, ಬೀಟ್ಗೆ ನೇಮಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇಲಾಖಾ ವತಿಯಿಂದ ದೂರವಾಣಿ ಸಂಖ್ಯೆಯನ್ನು ನೀಡಿದ್ದು, ಸದರಿಯವರ ಹೆಸರು, ಭಾವಚಿತ್ರ, ದೂರವಾಣಿ ಸಂಖ್ಯೆಗಳ ವಿವರಗಳನ್ನು ಒಳಗೊಂಡ ಮಾಹಿತಿಯ ಫಲಕವನ್ನು ಪ್ರತಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಲಾಗುತ್ತದೆ