ಮೈಸೂರು: ಏಕಾಏಕಿ ಪಾಲಿಕೆಯ ಸದಸ್ಯರ ಗಮನಕ್ಕೆ ತರದೆ ಸಿಯುಜಿ ನಂಬರ್ ಗಳನ್ನ ಸ್ಥಗಿತಗೊಳಿಸುರವ ಕ್ರಮವನ್ನ ಖಂಡಿಸಿ ಈ ಬಗ್ಗೆ ಮೊಬೈಲ್ ಬಿಲ್ ಹೆಚ್ಚಳದ ಬಗ್ಗೆ ತನಿಖೆ ನಡೆಸಬೇಕೆಂದು ಪಾಲಿಕೆಯ ಮೇಯರ್ ಆಗ್ರಹಿಸಿದರು.
ಇಂದು ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ತುರ್ತು ಪತ್ರಿಕಾಗೋಷ್ಟಿ ನಡೆಸಿದ ಮೇಯರ್ ರವಿಕುಮಾರ್ ಹಾಗೂ ಸದಸ್ಯರು ಯಾವುದೇ ಮಾಹಿತಿ ನೀಡದೆ ಸದಸ್ಯರಿಗೆ ನೀಡಿದ ಬಿಎಸ್ಎನ್ಎಲ್ ಸಿಯುಜಿ ನಂಬರ್ ಗಳನ್ನ ಸ್ಥಗಿತಗೊಳಿಸಿರುವ ಕ್ರಮವನ್ನ ಖಂಡಿಸುತ್ತೇವೆ. ಬಿಲ್ ಹೆಚ್ಚಳದ ಬಗ್ಗೆ ತನಿಖೆಯಾಗಬೇಕು. ಇನ್ಮುಂದೆ ಯಾವ ಸದಸ್ಯರು ಸಿಯುಜಿ ನಂಬರ್ ಗಳನ್ನ ಉಪಯೋಗಿಸುವುದಿಲ್ಲ ಎಂದು ಮೇಯರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿಕೆ ನೀಡಿದರು.
ಸರ್ಕಾರಿ ಆದೇಶದಲ್ಲಿ ಏನಿದೇ?
ಪೌರಾಡಳಿತ ನಿರ್ದೇಶನಲಾಯ ಬೆಂಗಳೂರು ಇವರು, ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರ ಸಭೆ ಹಾಗೂ ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಪೂರ್ವನುಮತಿ ಪಡೆಯದೆ ಸಿಯುಜಿ ನಂಬರ್ ಗಳನ್ನ ಉಪಯೋಗಿಸುತ್ತಿರುವುದು ಕಂಡು ಬಂದಿದ್ದು, ಇದರಿಂದ ಮಹಾನಗರ ಪಾಲಿಕೆಗೆ ಅರ್ಥಿಕವಾಗಿ ಹೊರೆಯಾಗುತ್ತಿದ್ದು, ಇದನ್ನ ತಡೆಯಲು ತಕ್ಷಣ ಎಲ್ಲಾ ಸಿಯುಜಿ ನಂಬರ್ ಗಳನ್ನ ಸ್ಥಗಿತಗೊಳಿಸಬೇಕೆಂದು ಆದೇಶ ನೀಡಿರುವ ಹಿನ್ನಲ್ಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಬಿಎಸ್ಎನ್ಎಲ್ ನಿಯಮಗಳೇನು?
ಮೈಸೂರು ಮಹಾನಗರ ಪಾಲಿಕೆಯಲ್ಲಿ 2007 ರಲ್ಲಿ ಕ್ರಮ ಸಂಖ್ಯೆ ಹಾಗೂ ವಾರ್ಡ್ ಸಂಖ್ಯೆಗಳ ಅನುಗುಣವಾಗಿ 300 ಸಿಯುಜಿ ನಂಬರ್ ಗಳನ್ನ ನೀಡಲಾಗಿತ್ತು. ಪ್ರತಿ ತಿಂಗಳು ಬಿಲ್ 1500 ಮೀರದಂತೆ ನಿಗದಿಪಡಿಸಲಾಗಿತ್ತು. ಆದರೆ ಕೆಲವು ಸದಸ್ಯರುಗಳು ಸಾವಿರಾರು ರೂಪಾಯಿ ಬಿಲ್ ಬರುವಂತೆ ಮಾತನಾಡಿದ್ದು, ಇದರಿಂದ ರಾಜ್ಯಸರ್ಕಾರ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಿಗೆ ಸುತ್ತೋಲೆಯನ್ನ ಹೊರಡಿಸಿದ್ದು, ಎಲ್ಲಾ ಸಿಯುಜಿ ನಂಬರ್ ಗಳನ್ನ ಸ್ಥಗಿತಗೊಳಿಸುವಂತೆ ಸೂಚಿಸಿದೆ.