ಮೈಸೂರು: ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬ ಗಾದೆಗೊಂದು ನಿದರ್ಶನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ವಿಶೇಷಾಧಿಕಾರಿಗೆ ಮೈಸೂರು ಮಹಾನಗರಪಾಲಿಕೆ ವತಿಯಿಂದ ಪ್ರತಿನಿತ್ಯ ಓಡಾಟಕ್ಕೆ ಐಷಾರಾಮಿ ಕಾರು ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ಒಂದಿಲ್ಲೊಂದು ಹಗರಣದಿಂದ ಸುದ್ದಿಯಾಗುತ್ತಿರುವ ಮೈಸೂರು ಮಹಾನಗರ ಪಾಲಿಕೆ ಮೊನ್ನೆ ಪಾಲಿಕೆಯ ಸದಸ್ಯರಿಂದ ದುರ್ಬಳಕೆಯಾಗುತ್ತದೆ ಎಂದು ಸಿಯುಜಿ ಸಿಮ್ ಕಾರ್ಡ್ ಗಳನ್ನ ಸ್ಥಗಿತಗೊಳಿಸಲಾಗಿತ್ತು. ಇದರ ಬೆನ್ನಲ್ಲೆ ಇಂದು ಪಾಲಿಕೆಯ ನಗರ ಯೋಜನ ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ, ಪತ್ರಕರ್ತರಿಗೆ ಪಾಲಿಕೆಯಲ್ಲಿ ಜನರ ಕ್ಯೋಟ್ಯಾಂತರ ರೂಪಾಯಿ ತೆರಿಗೆ ಹಣ ಯಾವ ರೀತಿ ದುರ್ಬಳಕೆಯಾಗುತ್ತಿದೆ ಎಂಬುದನ್ನ ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ.
ಉಸ್ತುವಾರಿ ಸಚಿವರ ವಿಶೇಷಾಧಿಕಾರಿಗೆ ಕಾರು:
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ವಿಶೇಷಾಧಿಕಾರಿಗಳಿಗೆ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಪ್ರತಿದಿನ ಓಡಾಟ ನಡೆಸಲು ಐಷಾರಾಮಿ ಕಾರು ನೀಡಿದ್ದು, ಇದರ ಬಾಡಿಗೆ ಹಣವನ್ನ ಪಾಲಿಕೆ ನೀಡುತ್ತಿದೆ. ಜೊತೆಗೆ 8 ಜನ ಚುನಾಯಿತ ಪ್ರತಿನಿಧಿಗಳಿಗೆ ಶಾಸನಬದ್ದವಾಗಿ ಆಯ್ಕೆಯಾದವರಿಗೆ ಕಾರುಗಳನ್ನ ನೀಡಿದ್ದು ಸರಿಯಲ್ಲ. ಇವರಿಗೆ ಕಾರ್ ನೀಡುವ ಅಧಿಕಾರ ಇಲ್ಲ ಎಂದು ಹೇಳಿದರು.
ಪಾಲಿಕೆಯಲ್ಲಿ ವಾಹನಗಳ ಹಗರಣ:
ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು, ಜನಪ್ರತಿನಿದಿಗಳು ಓಡಾಟ ನಡೆಸಲು 58 ಕಾರ್ ಗಳನ್ನ ಬಾಡಿಗೆಗೆ ಪಡೆದಿದ್ದು, ಪ್ರತಿ ತಿಂಗಳು 15 ಲಕ್ಷ ಬಾಡಿಗೆ ನೀಡುತ್ತಾರೆ. ವರ್ಷಕ್ಕೆ 1.70 ಕೋಟಿ ಬಾಡಿಗೆ ನೀಡುತ್ತಾರೆ. ಆದರೆ ಈ ರೀತಿ ವಾಹನಗಳನ್ನ ಬಾಡಿಗೆಗೆ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರಿಂದ ಕಳೆದ ಮೂರು ತಿಂಗಳಿನಿಂದ ಮೈಸೂರು ನಗರ ಯೋಜನ ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷನಾದ ನನಗೆ ನೀಡಿದ ಕಾರನ್ನ ವಾಪಸ್ಸ್ ನೀಡಿದ್ದೇನೆ. ಮೂರು ಬಾಡಿಗೆಯನ್ನ ನಾನೇ ಕಟ್ಟುತ್ತೇನೆ. ಪಾಲಿಕೆಯಲ್ಲಿ ವಾಹನಗಳ ಬಾಡಿಗೆ ವಿಚಾರದಲ್ಲಿ ದೊಡ್ಡ ಹಗರಣವೇ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಆಗ್ರಹಿಸಿದರು.