ಮೈಸೂರು: ತನ್ನೆರಡು ಕಿಡ್ನಿಯನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ಮಂಜುಳ ಎಂಬುವರ ಪುತ್ರ ನಟ ಶಿವರಾಜ್ಕುಮಾರ್ ಅವರ ಅಭಿಮಾನಿ ಜಯಕುಮಾರ್ ಕಿಡ್ನಿವೈಫಲ್ಯದಿಂದ ಮೃತಪಟ್ಟ ದುರ್ದೈವಿ. ಈತನ ಎರಡು ಕಿಡ್ನಿ ವೈಫಲ್ಯವಾಗಿದ್ದರಿಂದ ಕಳೆದ ಹಲವು ಸಮಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದನು. ಮನೆಯಲ್ಲಿ ಬಡತನವಿದ್ದುದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ನೀಡುವುದು ಪೋಷಕರಿಗೆ ಸಾಧ್ಯವಾಗಿರಲಿಲ್ಲ.
ಆರೋಗ್ಯ ಬಿಗಡಾಯಿಸಿದ ಪರಿಣಾಮ ಈತನಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಡುವೆ ವೈದ್ಯರು ಬಾಲಕ ಹೆಚ್ಚು ದಿನ ಬದುಕುವ ಭರವಸೆಯನ್ನು ನೀಡಿರಲಿಲ್ಲ. ಆದರೆ ಚಿಕಿತ್ಸೆಯನ್ನು ಮುಂದುವರೆಸಲಾಗಿತ್ತು. ಈ ಮಧ್ಯೆ ಆತ ನಟ ಶಿವರಾಜ್ ಕುಮಾರ್ ಮತ್ತು ಸಂಸದ ಧ್ರುವನಾರಾಯಣ್ ಅವರನ್ನು ನೋಡುವ ಬಯಕೆ ವ್ಯಕ್ತಪಡಿಸಿದ್ದನು. ಆತನ ಬಯಕೆಯಂತೆಯೇ ನಟ ಶಿವರಾಜ್ ಕುಮಾರ್ ಮತ್ತು ಸಂಸದ ಆರ್. ಧ್ರುವನಾರಾಯಣ್ ಅವರನ್ನು ಭೇಟಿ ಮಾಡಿಸಲಾಗಿತ್ತು. ಇದೀಗ ಆತ ಮೃತಪಟ್ಟಿದ್ದು, ಹೆಚ್.ಡಿ.ಕೋಟೆಯ ಆತನ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.