ಮೈಸೂರು: ಇತ್ತೀಚಿಗಿನ ದಿನಗಳಲ್ಲಿ ಕೃಷಿ ಕಾರ್ಯಕ್ಕೆ ಕಾರ್ಮಿಕರ ಸಮಸ್ಯೆ ಕಂಡು ಬರುತ್ತಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಹೆಚ್ಚಿನವರು ಕೃಷಿ ಕಾರ್ಯಕ್ಕೆ ಯಂತ್ರಗಳ ಮೊರೆ ಹೋಗುತ್ತಿರುವುದು ಕಂಡು ಬರುತ್ತಿದೆ.
ಭತ್ತ ಬಿತ್ತನೆ ನಾಟಿಗೆಲ್ಲ ಈಗಾಗಲೇ ಯಂತ್ರಗಳು ಬಂದಿವೆ. ಆದರೆ ರಾಗಿ ಬಿತ್ತನೆಗೆ ಲಭ್ಯವಿಲ್ಲದೆ ಪರದಾಡುವಂತಾಗಿತ್ತು. ಇದೀಗ ರಾಗಿ ಕೃಷಿಗೆ ಅನುಕೂಲವಾಗುವಂತೆ ಬೆಂಗಳೂರಿನ ವಿಎಸ್ಟಿ ಟಿಲ್ಲರ್ಸ್ ಟ್ರಾಕ್ಟರ್ಸ್ ಸಂಸ್ಥೆ ರಾಗಿ ಬಿತ್ತನೆ ಟಿಲ್ಲರ್ ನ ಬಿಡುಗಡೆ ಮಾಡಿದ್ದು ಕೃಷಿಕರಿಗೆ ವರದಾನವಾಗಲಿದೆ. ಈಗ ಮಾರುಕಟ್ಟೆಗೆ ಬಂದಿರುವ ಟಿಲ್ಲರ್ ರಾಗಿಯನ್ನು ನೆಲದಡಿಯಲ್ಲಿ ಬಿತ್ತಲು ಸೂಕ್ತವಾಗಿದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ರಾಗಿ ಬೆಳೆಗಾರರಿಗೆ ಉಪಯುಕ್ತವಾಗಿದೆ. ವಿಎಸ್ಟಿ ಟಿಲ್ಲರ್ಸ್ ಟ್ರಾಕ್ಟರ್ಸ್ ಸಂಸ್ಥೆ ಈ ಹೊಸ ಯಂತ್ರವನ್ನು ಕೇತ್ರ ಪ್ರಯೋಗ ನಡೆಸಿದ ಬಳಿಕ ಬೆಂಗಳೂರಿನ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾನಿಲಯದಲ್ಲೂ ಹಲವು ಪ್ರಾಯೋಗಿಕ ಪರೀಕ್ಷೆ ನಡೆಸಿ, ಪ್ರಸಕ್ತ ಮುಂಗಾರಿಗೆ ರೈತರಿಗೆ ಮಾರುಕಟ್ಟೆಯಲ್ಲಿ ದೊರೆಯುವಂತೆ ಮಾಡಿದೆ.
ಕೃಷಿ ಕಾರ್ಮಿಕರ ವಲಸೆಯಿಂದ ತೊಂದರೆ ಅನುಭವಿಸುತ್ತಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಈ ಯಂತ್ರದ ಮೂಲಕ ರಾಗಿ ವ್ಯವಸಾಯವನ್ನು ಸುಲಭದಲ್ಲಿ ಕೈಗೊಳ್ಳಬಹುದಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆಯ ಕೃಷಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಪ್ರೊ. ಎಚ್ ಜಿ ಆಶೋಕ್ ಪ್ರಕಾರ ರಾಗಿ ಬೀಜಗಳನ್ನು ನೆಲದೊಳಗೆ 2.5 ಸೆಂಟಿಮೀಟರ್ ಆಳದಲ್ಲಿ ಬಿತ್ತನೆ ಮಾಡಬೇಕು. ದೊಡ್ಡ ಬಿತ್ತನೆ ಯಂತ್ರಗಳು ಇದಕ್ಕೆ ಸೂಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಹೊಸ ಯಂತ್ರದ ಆವಿಷ್ಕಾರ ರಾಗಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಿಕೊಡುವುದರಲ್ಲಿ ಎರಡು ಮಾತಿಲ್ಲ.
ಕೃಷಿ ಕೂಲಿ ಕಾರ್ಮಿಕರ ಕೊರತೆ ಹಾಗೂ ವಲಸೆಯ ಅಡ್ಡ ಪರಿಣಾಮಗಳನ್ನು ತಪ್ಪಿಸುವಲ್ಲಿ ಯಂತ್ರಗಳ ಪಾತ್ರ ದೊಡ್ಡದು. ಆದರೆ ಈ ಯಾಂತ್ರೀಕರಣದ ಉಪಯೋಗ ಇನ್ನೂ ಮಧ್ಯಮ ಹಾಗೂ ಸಣ್ಣ ರೈತರಿಗೆ ತಲುಪಿಲ್ಲ ಎಂದರೆ ತಪ್ಪಾಗಲಾರದು. ಬಯಲು ಸೀಮೆಯ ಬಹುತೇಕ ಕೃಷಿಕರು ರಾಗಿಯನ್ನು ಬೆಳೆಯುತ್ತಿದ್ದು, ಅವರಿಗೆ ಇದು ಉಪಯೋಗಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ.