ಮೈಸೂರು: ನಗರದ ಹೊರವಲಯದಲ್ಲಿ ಸಮಯ ಸಾಧಿಸಿ ಮನೆಗಳಿಗೆ ಕನ್ನ ಹಾಕಿ ನಗದು, ಚಿನ್ನಾಭರಣಗಳನ್ನು ದೋಚುತ್ತಿದ್ದ ಖತರ್ನಾಕ್ ಕಳ್ಳರಿಬ್ಬರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 16 ಲಕ್ಷ ರೂ ಮೌಲ್ಯದ 630 ಗ್ರಾ ಚಿನ್ನಾಭರಣ ಹಾಗೂ ಅರ್ಧ ಕೆ.ಜಿ.ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಕಳ್ಳರನ್ನು ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮದ ಬೋವಿ ಕಾಲೋನಿಯ ಬಿ.ವಿ.ರವಿ ಅಲಿಯಾಸ್ ಗೂಗ್ಲಿ ಹಾಗೂ ಅದೇ ಗ್ರಾಮದ ನಿವಾಸಿಯಾಗಿದ್ದು ಇದೀಗ ಹೂಟಗಳ್ಳಿಯ ಹೊನ್ನೇಗೌಡ ಬ್ಲಾಕ್ ನಲ್ಲಿ ವಾಸವಾಗಿರುವ ಬಿ.ಎಚ್.ಯೋಗೇಶ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಒಂದೇ ಗ್ರಾಮದವರಾಗಿದ್ದರಿಂದ ಜೊತೆಯಲ್ಲಿ ಬೇರೆ ಯಾರನ್ನೂ ಸೇರಿಸಿಕೊಳ್ಳದೆ ಯಾರಿಗೂ ಸಂಶಯ ಬಾರದಂತೆ ಮನೆಗಳಿಗೆ ಕನ್ನ ಹಾಕುವ ಕೈಚಳಕ ಹೊಂದಿದ್ದರು. ಯೋಗೇಶ್ ಗ್ರಾಮದಿಂದ ರವಿಯನ್ನು ಮೈಸೂರಿನ ಹೂಟಗಳ್ಳಿಯ ತನ್ನ ರೂಂಗೆ ಕರೆಯಿಸಿಕೊಂಡು ಅಲ್ಲಿಯೇ ಕುಳಿತು ಮನೆಗೆ ಕನ್ನ ಹಾಕುವ ಸ್ಕೆಚ್ ರೂಪಿಸುತ್ತಿದ್ದರು.
ಮೈಸೂರು ನಗರದ ಹೊರವಲಯದಲ್ಲಿ ಸುತ್ತಾಡಿ ಯಾವ ಮನೆಗೆ ಬೀಗ ಹಾಕಿದೆ? ಯಾರು ಮನೆಯಲ್ಲಿ ಇಲ್ಲ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ರಾತ್ರಿ ವೇಳೆಯಲ್ಲಿ ಕಳ್ಳತನಕ್ಕೆ ಮುಂದಾಗುತ್ತಿದ್ದರು. ಇದುವರೆಗೆ ಇವರು ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯ 06, ಸರಸ್ವತಿಪುರಂ ಪೊಲೀಸ್ ಠಾಣೆಯ 02, ಆಲನಹಳ್ಳಿ ಪೊಲೀಸ್ ಠಾಣೆಯ 02, ಕುವೆಂಪುನಗರ ಪೊಲೀಸ್ ಠಾಣೆಯ 01, ಕೃಷ್ಣರಾಜ ಪೊಲೀಸ್ ಠಾಣೆಯ 01, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸ್ ಠಾಣೆಯ 01, ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯ 01 ಕನ್ನ ಕಳವು ಮತ್ತು ಸಾಮಾನ್ಯ ಕಳುವು ಹೀಗೆ ಹದಿನಾಲ್ಕಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದರು.
ಈ ನಡುವೆ ಕಳವು ಪ್ರಕರಣ ಹೆಚ್ಚಾಗುತ್ತಿದ್ದಂತೆಯೇ ಪ್ರಕರಣ ಪತ್ತೆಗಾಗಿ ಸಿಸಿಬಿ ಘಟಕದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕ್ರಿಪ್ರ ಕಾರ್ಯಾಚರಣೆ ಸಿಸಿಬಿ ಪೊಲೀಸರು ಮುಂದಾಗಿದ್ದರು. ಈ ನಡುವೆ ಹೂಟಗಳ್ಳಿಯ ಕೆಹಚ್ ಬಿ ಕಾಲೋನಿಯಲ್ಲಿ ನಡೆದ ಮನೆ ಕಳವು ಪ್ರಕರಣದ ಹಿಂದೆ ಬಿದ್ದು ತನಿಖೆ ನಡೆಸಿದಾಗ ರವಿ ಮತ್ತು ಯೋಗೇಶ್ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ಕರೆ ತಂದು ಪೊಲೀಸ್ ಸ್ಟೈಲ್ನಲ್ಲಿ ವಿಚಾರಣೆಗೊಳಪಡಿಸಿದಾಗ ಇದುವರೆಗೆ ನಡೆಸಿದ ಕೃತ್ಯವನ್ನು ಬಾಯಿಬಿಟ್ಟಿದ್ದಾರೆ. ಬಂಧಿತರಿಂದ 14 ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ 16 ಲಕ್ಷ ರೂ ಮೌಲ್ಯದ 630 ಗ್ರಾಂ ತೂಕದ ಚಿನ್ನಾಭರಣ ಹಾಗೂ ಅರ್ಧ ಕೆ.ಜಿ. ತೂಕದ ಬೆಳ್ಳಿಯ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.