ಮೈಸೂರು: ಯುವಕರು ಮನಸ್ಸು ಮಾಡಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಸಣ್ಣಪುಟ್ಟ ಕೆಲಸಕ್ಕೂ ಸರ್ಕಾರವನ್ನು ಕಾಯದೆ ತಾವೇ ಮಾಡಬಹುದು ಎಂಬುದನ್ನು ನಂಜನಗೂಡು ಪಟ್ಟಣದ ಯುವಕರು ತೋರಿಸಿಕೊಟ್ಟಿದ್ದಾರೆ.
ನಂಜನಗೂಡಿನ ಹಳ್ಳದಕೇರಿ ಬಡಾವಣೆಯ ಗುಂಡ್ಲು ನದಿಗೆ ಅಡ್ಡಲಾಗಿ ಕಟ್ಟಿರುವ ಶತಮಾನಗಳ ಇತಿಹಾಸ ಹೊಂದಿರುವ ಸೇತುವೆಯಿದ್ದು, ಈ ಸೇತುವೆಯ ಮೇಲೆ ನೂರಾರು ವಾಹನಗಳು ಸಂಚರಿಸುತ್ತವೆ. ಸದ್ಯದ ಮಟ್ಟಿಗೆ ಇಲ್ಲಿ ಹೊಸ ಸೇತುವೆ ನಿರ್ಮಾಣದ ಬಗ್ಗೆ ಯಾರೂ ಮನಸ್ಸು ಮಾಡದ ಕಾರಣದಿಂದಾಗಿ ಹಳೆಯ ಸೇತುವೆಯ ಮೇಲೆಯೇ ಸಂಚಾರ ನಡೆಯುತ್ತಿದೆ. ಸೇತುವೆ ಹಳೆಯ ಕಾಲದ್ದಾಗಿದ್ದು, ಇತ್ತೀಚೆಗಿನ ವಾಹನಗಳ ದಟ್ಟಣೆಯನ್ನು ತಡೆಯುವ ಸಾಮಥ್ರ್ಯ ಇದಕ್ಕಿಲ್ಲ ಎಂಬುದು ಗೊತ್ತಿದ್ದರೂ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗುವುದಿರಲಿ ಈ ಸೇತುವೆಯನ್ನು ದುರಸ್ತಿಗೊಳಿಸುವ ಕಾರ್ಯಕ್ಕೂ ನಮ್ಮ ಜನಪ್ರತಿನಿಧಿಗಳು ಮುಂದಾಗಿಲ್ಲ. ಹೀಗಾಗಿ ಸೇತುವೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದಲ್ಲದೆ, ಎರಡು ಬದಿಯ ತಡೆಗೋಡೆಗಳು ಕಳಾಹೀನವಾಗಿದ್ದವು. ರಾತ್ರಿ ವೇಳೆಯಲ್ಲಿ ತಡೆಗೋಡೆ ಇದೆ ಎಂಬುದು ಚಾಲಕರಿಗೆ ಗೊತ್ತಾಗದೆ ಅವಘಡಗಳು ಸಂಭವಿಸುತ್ತಿದ್ದವು.
ಸೇತುವೆಯಲ್ಲಿ ಬೆಳೆದಿರುವ ಅರಳಿ ಗಿಡಗಳನ್ನು ತೆರವುಗೊಳಿಸಿ, ಸೇತುವೆಯನ್ನು ದುರಸ್ತಿ ಮಾಡುವಂತೆ ಸ್ಥಳೀಯ ನಗರಸಭಾ ಸದಸ್ಯರಿಗೆ ಹಾಗೂ ನಗರಸಭಾ ಆಯುಕ್ತರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ದುರಸ್ತಿಗಾಗಿ ಹಲವು ವರ್ಷಗಳಿಂದ ಕಾಯುತ್ತಾ ಬಂದಿದ್ದರೂ ಸೇತುವೆಯನ್ನು ಅಭಿವೃದ್ಧಿ ಪಡಿಸುವುದಿರಲಿ, ಅದರಲ್ಲಿ ಬೆಳೆದ ಗಿಡವನ್ನು ತೆರವುಗೊಳಿಸಲು ಕೂಡ ಮುಂದಾಗಿರಲಿಲ್ಲ. ಇದರಿಂದ ಬೇಸತ್ತ ಯುವಕರು ತಾವೇ ಹಣ ಹಾಕಿ ಶ್ರಮದಾನ ಮಾಡುವ ಮೂಲಕ ಸೇತುವೆಗೊಂದು ಹೊಸತನ ನೀಡಿದ್ದಾರೆ. ಸೇತುವೆಯ ಸಂಧಿಗಳಲ್ಲಿ ಬೆಳೆದಿದ್ದ ಅರಳಿ ಸೇರಿದಂತೆ ಇತರೆ ಗಿಡಗಳನ್ನು ಕಡಿದು ತೆಗೆದು ಸ್ವಚ್ಛಗೊಳಿಸಿದ್ದಲ್ಲದೆ, ತಡೆಗೋಡೆಯನ್ನು ದುರಸ್ತಿಗೊಳಿಸಿ ಅದಕ್ಕೆ ಬಿಳಿ ಬಣ್ಣವನ್ನು ಬಳಿದು ವಾಹನ ಚಾಲಕರಿಗೆ ರಾತ್ರಿ ವೇಳೆಯಲ್ಲಿ ತಡೆಗೋಡೆ ಕಾಣುವಂತೆ ಮಾಡಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೆ ಕಾರ್ಯ ನಿರ್ವಹಿಸಿದ ಯುವಕರು ಸ್ಥಳೀಯ ನಗರಸಭೆ ಮಾಡದ ಕೆಲಸವನ್ನು ತಾವು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪುರಾತನವಾದ ಈ ಸೇತುವೆ ಮೊದಲು ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಈಗ ಇದು ದೇವರಸನಹಳ್ಳಿ, ಹೊಸೂರು, ಉಪ್ಪನಹಳ್ಳಿ, ಗೋಳೂರು ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಪ್ರತಿದಿನ ಸಾವಿರಾರು ವಾಹನಗಳು ಇದರ ಮೇಲೆಯೇ ಸಾಗುತ್ತಿವೆ.