ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಡ ಶುಕ್ರವಾರ ಕಾರ್ಯಕ್ರಮ ಜೂನ್ 30, ಜುಲೈ 7, ಜುಲೈ 14, ಜುಲೈ 21 ಹಾಗೂ ಚಾಮುಂಡೇಶ್ವರಿ ವರ್ಧಂತಿ ಜುಲೈ 16 ರಂದು ನಡೆಯಲಿದೆ. ಭಕ್ತಾದಿಗಳಿಗೆ ಸುಗಮ ವಾಹನ ಸಂಚಾರದ ವ್ಯವಸ್ಥೆ ಕಲ್ಪಿಸಲು ಸದರಿ ದಿನಗಳಂದು ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳು ತಮ್ಮ ವಾಹನವನ್ನು ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ನಿಲುಗಡೆ ಮಾಡಿ ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುವ ಉಚಿತ ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ದೇವಸ್ಥಾನಕ್ಕೆ ತೆರಳಬೇಕಾಗಿರುತ್ತದೆ. ಉಚಿತ ಬಸ್ ಸೌಲಭ್ಯ ಬೆಳಗಿನ ಜಾವ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದಲ್ಲಿ ಉಚಿತ ಪ್ರಸಾದ ವಿನಿಯೋಗದ ವಾಹನಗಳಿಗೆ ಚಾಮುಂಡಿಬೆಟ್ಟದ ಬಸ್ನಿಲ್ದಾಣದ ಎದುರಿರುವ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಿದ್ದು, ಪ್ರಸಾದ ವಿನಿಯೋಗದ ವಾಹನಗಳಿಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಅಥವಾ ಜಿಲ್ಲಾಡಳಿತದಿಂದ ನೀಡುವ ಪಾಸ್ ಕಡ್ಡಾಯವಾಗಿರುತ್ತದೆ. ನಿಗಧಿಪಡಿಸಿದ ಸ್ಥಳದಲ್ಲಿ ಹಾಗೂ ನಿಗಧಿಪಡಿಸಿದ ಸಮಯದಲ್ಲಿ ಪ್ರಸಾದ ವಿನಿಯೋಗ ಮಾಡುವುದು.
ದೇವಸ್ಥಾನಕ್ಕೆ ಬರುವ ವಿ.ವಿ.ಐ.ಪಿ., ವಿ.ಐ.ಪಿ ಮಾಧ್ಯಮ ವಾಹನಗಳು, ಕರ್ತವ್ಯದ ಮೇರೆಗೆ ತೆರಳುವ ವಾಹನಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಾಹನ ಪಾಸ್ ನೀಡಲಾಗುವುದು. ಈ ವಾಹನಗಳಿಗೆ ಬೆಟ್ಟದ ಮೇಲೆ ಹೋಗಲು ಅವಕಾಶವಿದ್ದು, ಪಾರ್ಕಿಂಗ್ ಗಾಗಿ ನಿಗಧಿಪಡಿಸಿರುವ 2, 3ನೇ ಪಾರ್ಕಿಂಗ್ ಜಾಗಗಳಲ್ಲಿ ವಾಹನ ನಿಲುಗಡೆ ಮಾಡುವುದು. ಮಹಿಷಾಸುರ ಪ್ರತಿಮೆದಿಂದ ದೇವಸ್ಥಾನದ ವರೆಗೆ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಆಷಾಡ ಶುಕ್ರವಾರದ ಹಿಂದಿನ ದಿನ ರಾತ್ರಿ 10 ಗಂಟೆಯಿಂದಲೇ ವಾಹನಗಳಿಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶಿಸಲು ಅನುಮತಿ ಇರುವುದಿಲ್ಲ.
ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಹಾಗೂ ಹೋಗುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟದಲ್ಲಿರುವ ನಿವಾಸಿಗಳು ವಾಹನ ಸಂಚಾರಕ್ಕೆ ಅನುಮತಿ ಪಡೆಯಲು ಡಿ.ಎಲ್, ವಾಹನದ ದಾಖಲಾತಿ, ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಅನುಮತಿ ಪಾಸ್ ಪಡೆದುಕೊಳ್ಳಬೇಕಾಗುತ್ತದೆ.
ದರ್ಶನದ ವ್ಯವಸ್ಥೆ
ಆಷಾಡ ಶುಕ್ರವಾರಗಳಾದ ಜೂ. 30, ಜು.7, 14, 21 ಹಾಗೂ ಅಮ್ಮನವರ ವರ್ಧಂತಿ ಮಹೋತ್ಸವ ದಿನವಾದ 16ರಂದು ಬೆಳಿಗ್ಗೆ 5.30 ಗಂಟೆಯಿಂದ ರಾತ್ರಿ 9.30 ಗಂಟೆ ವರೆಗೆ ಮೂರು ಪ್ರತ್ಯೇಕ ಸರತಿ ಸಾಲುಗಳಲ್ಲಿ ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಚಿತ ದರ್ಶನದ ಸಾಲಿಗೆ ಶ್ರೀ ನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ಕಲ್ಪಿಸಿದೆ. ರೂ.50 ಗಳ ವಿಶೇಷ ಸರತಿ ಸಾಲಿಗೆ ಶ್ರೀ ಮಹಾಬಲೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ಕಲ್ಪಿಸಿದೆ ಹಾಗೂ ರೂ.300 ಗಳ ಅಭಿಷೇಕ ಸೇವೆಯವರಿಗೆ ಸಾಲು ದೇವಸ್ಥಾನದ ಉತ್ತರ ದಿಕ್ಕಿನ ಹೈಮಾಸ್ಟ್ ಕಂಬ ನಂದಿನಿ ಪಾರ್ಲರ್ ಮುಂಭಾಗದಿಂದ ಪ್ರಾರಂಭವಾಗಲಿದೆ.
ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಆಷಾಡ ಶುಕ್ರವಾರಗಳ ಹಿಂದಿನ ದಿನ ರಾತ್ರಿ 9.30ರಿಂದಲೇ ನಿರ್ಬಂಧಿಸಲಾಗುತ್ತದೆ. ಖಾಸಗಿ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಉಚಿತವಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ದೇವಸ್ಥಾನಕ್ಕೆ ಹೋಗಿ, ಬರುವ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 3 ಗಂಟೆಯಿಂದ ಬಸ್ಸುಗಳ ಸಂಚಾರ ಪ್ರಾರಂಭವಾಗುತ್ತದೆ. ರಾತ್ರಿ 9ಗಂಟೆವರೆಗೂ ಸಂಚಾರ ಇರುತ್ತದೆ.
ಖಾಸಗಿ ವಾಹನಗಳನ್ನು ದಸರಾ ವಸ್ತು ಪ್ರದರ್ಶನದ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ ನಿಲುಗಡೆ ಮಾಡಿ, ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ 17ರೂ. ಶುಲ್ಕ ಪಾವತಿಸಿ, ಬೆಟ್ಟಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 5.30 ಗಂಟೆಯಿಂದ ಬಸ್ಸುಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 9 ಗಂಟೆ ನಂತರ ಬಸ್ಸುಗಳ ಸಂಚಾರ ಇರುವದಿಲ್ಲ.
ಪ್ರಸಾದ ಹಂಚುವಿಕೆ ಆಷಾಡ ಶುಕ್ರವಾರ ಮತ್ತು ಅಮ್ಮನವರ ವರ್ಧಂತಿ ದಿನಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸುವಂತಹ ಸೇವಾರ್ಥದಾರರು ಬೆಟ್ಟಕ್ಕೆ ಪ್ರವೇಶಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆ (ಕೊಠಡಿ ಸಂ.15)ಯಲ್ಲಿ ಅನುಮತಿ ಪಾಸುಗಳನ್ನು ಪಡೆದು, ಬೆಟ್ಟದಲ್ಲಿರುವ ಆಹಾರ ಪರಿವೀಕ್ಷಕರಿಂದ ಪರಿಶೀಲಿಸಿಕೊಂಡು ಚಾಮುಂಡಿಬೆಟ್ಟದ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಹಾಕಿರುವ ಫುಡ್ ಶೆಲ್ಟರ್ ನಲ್ಲಿ ಮಾತ್ರ ವಿತರಿಸಲು ಅವಕಾಶ ನೀಡಲಾಗಿದೆ. ಪ್ಲಾಸ್ಟಿಕ್ ಬ್ಯಾಗು, ನೀರಿನ ಬಾಟಲ್ ಗಳ ಬಳಕೆಯನ್ನು ನಿಷೇಧಿಸಲಾಗಿದೆ.