ಮೈಸೂರು: ದೇವಸ್ಥಾನದಲ್ಲಿ ತುಂಬಾ ರಷ್ ಇದೆ, ನಾನು ಪೊಲೀಸ್ ನಿಮ್ಮ ಚಿನ್ನದ ಆಭರಣವನ್ನ ಇಲ್ಲಿ ಕೊಟ್ಟು ಹೋಗಿ ಎಂದು ವೃದ್ದೆಗೆ ನಂಬಿಸಿ ಚಿನ್ನದ ಸರವನ್ನ ಕದ್ದೋಗಿರುವ ಘಟನೆ ನಗರದ ಕೃಷ್ಣಾಧಾಮದ ಬಳಿ ನಡೆದಿದೆ.
ಏನಿದು ಘಟನೆ?: ಹೀಗೆ ಸರ ಕಳೆದುಕೊಂಡ ಮಹಿಳೆಯನ್ನು ಸರಸ್ವತಿಪುರಂನ 14ನೇ ಮುಖ್ಯರಸ್ತೆಯ ನಾಗರತ್ನಮ್ಮ (65) ಎನ್ನಲಾಗಿದೆ. ಇವರು ಕೃಷ್ಣಧಾಮಕ್ಕೆ ಹೋಗಲು ಬಂದ ಸಂದರ್ಭ ಕೃಷ್ಣಧಾಮದ ಬಳಿ ನಿಂತಿದ್ದ ಇಬ್ಬರು ಅಮ್ಮಾ ನಾವು ಪೊಲೀಸಿನವರು. ಒಳಗಡೆ ರಶ್ ಇದೆ. ನಿಮ್ಮ ಬಂಗಾರಗಳನ್ನು ಇಲ್ಲೇ ಕೊಟ್ಟು ಹೋಗಿ ಎಂದಿದ್ದಾರೆ.
ದುಷ್ಕರ್ಮಿಯ ಜೊತೆಯಿದ್ದ ಓರ್ವ ತನ್ನ ಬಳಿಯಿದ್ದ ಸರವನ್ನೂ ಇನ್ನೊಬ್ಬನಿಗೆ ನೀಡಿದ ನಾಟಕವಾಡಿದ್ದಾನೆ. ಇದನ್ನು ನೋಡಿದ ನಾಗರತ್ನಮ್ಮ ತನ್ನ 32 ಗ್ರಾಂ ತೂಕದ ಸರ ಹಾಗೂ ಬಳೆ ನೀಡಿದ್ದಾರೆ. ಆದರೆ ಅವರು ಬಳೆಯನ್ನು ಅಲ್ಲೇ ಬಿಟ್ಟು ಸರವನ್ನು ಪಡೆದು ಪರಾರಿಯಾಗಿದ್ದಾರೆ. ನೊಂದ ಮಹಿಳೆ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಸರಸ್ವತಿಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರಿಗೆ ನಾಗರತ್ನಮ್ಮ ನನಗೆ ಈ ಮೊದಲು ಜಾಗೃತಿ ಮೂಡಿಸಿದ್ದರು. ಹಾಗೆ ಇರಬೇಕು ಅಂದುಕೊಂಡೆ. ಆದರೆ ಅಷ್ಟೊತ್ತಿಗೆ ಏನಾಯಿತೋ ಗೊತ್ತಿಲ್ಲ. ಅವರು ಸರ ಕದ್ದು ಪರಾರಿಯಾಗಿದ್ದಾರೆ ಎಂದು ತಮ್ಮ ನೋವನ್ನ ತೋಡಿಕೊಂಡರು.
ಈ ಸಂಬಂಧ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.