ಮೈಸೂರು: ಮಲ್ಲಿಗೆ ನಗರಿ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡದ ಖ್ಯಾತ ಕವಿ ಡಿ.ಎಸ್. ಕರ್ಕ್ ವಿರಚಿತ ಹಚ್ಚೇವು ಕನ್ನಡದ ದೀಪ ಗೀತೆಯ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ಬೆಳಗುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತನ್ನ ಹುಟ್ಟೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿಯಾಗಿ ಉದ್ಘಾಟಿಸುವ ಭಾಗ್ಯ ದೊರೆತಿರುವುದಕ್ಕೆ ಸಂತಸ ಪಟ್ಟರು. ಮೈಸೂರು ಅನೇಕ ಸಾಹಿತಿಗಳ ತವರೂರು ಆಗಿದ್ದು ಬಿಎಂಶ್ರೀ, ತೀನಂಶ್ರೀ, ಕುವೆಂಪು, ಡಿ.ಎಲ್.ನರಸಿಂಹಾಚಾರ್ ಅವರಿಂದ ಮೊದಲ್ಗೊಂಡು ದೇಜಗೌ, ಹಾ.ಮಾ.ನಾಯಕ್, ಜಿ.ಎಸ್.ಶಿವರುದ್ರಪ್ಪ, ಸುಜನಾ ಸೇರಿದಂತೆ ಹಲವು ಸಾಹಿತಿಗಳು ಮೈಸೂರನ್ನು ಶ್ರೀಮಂತಗೊಳಿಸಿದ್ದು, ಇಂತಹ ನಗರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ ಎನ್ನಲಾಗಿದೆ.
ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ ಅದು ಕನ್ನಡದ ಜನ, ನೆಲ, ಜಲ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕರ್ನಾಟಕವಾಗಿದೆ. ಹೀಗಾಗಿ ಇಲ್ಲಿ ನೆಲೆಸಿರುವವರೆಲ್ಲ ಕನ್ನಡಿಗರಾಗಿದ್ದಾರೆ. ಭಾಷೆ ಅನ್ನದ ಭಾಷೆಯಾದರೆ ಅದು ಬೆಳೆಯುತ್ತದೆ, ಉಳಿಯುತ್ತದೆ ಎನ್ನುವ ಮಾತಿದೆ. ಆದ್ದರಿಂದ ಕೃಷಿ, ಉದ್ಯಮ, ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಎಲ್ಲದರ ಅಭಿವೃದ್ಧಿಯಲ್ಲಿ ಕನ್ನಡದ ಪಾತ್ರವಿರುವುದನ್ನು ಅಲ್ಲಗೆಳೆಯುವಂತಿಲ್ಲ ಎಂದರು.
ಮಾತೃಭಾಷೆಯ ಶಿಕ್ಷಣಕ್ಕೆ ಸರ್ಕಾರ ಬದ್ಧವಾಗಿದ್ದು. ಈ ಬಗೆಗೆ ಇರುವ ಕಾನೂನು ತೊಡಕನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ. ಈ ಸಂಬಂಧ ಕೇಂದ್ರಕ್ಕೆ ಎರಡು ಪತ್ರಗಳನ್ನು ಬರೆದಿದ್ದು, ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಹೇಳಿದರು.
ಈ ಸಂದರ್ಭ ಸಮ್ಮೇಳನಾಧ್ಯಕ್ಷರಾದ ಪ್ರೊ.ಚಂದ್ರಶೇಖರ ಪಾಟೀಲ, ನೀಲ ಪಾಟೀಲ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮನು ಬಳಿಗಾರ್, ಲೋಕೋಪಯೋಗಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷರಾದ ಪ್ರೊ.ಬರಗೂರು ರಾಮಚಂದ್ರಪ್ಪ, ನಿತ್ಯೊತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್, ಗೊ.ರು.ಚನ್ನಬಸಪ್ಪ, ಇತರ ಪ್ರಮುಖರು ಇದ್ದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾನಪದೀಯ ವಾದ್ಯ ಡೊಳ್ಳು ಬಾರಿಸುವ ಮೂಲಕ ನುಡಿಜಾತ್ರೆಯ ಡಿಂಡಿಮ ಬಾರಿಸಿದರು, ಸಮ್ಮೇಳನಾಧ್ಯಕ್ಷರಾದ ಪ್ರೊ.ಚಂದ್ರಶೇಖರ ಪಾಟೀಲ ಅವರು ಡೊಳ್ಳು ಬಾರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಸಾಹಿತ್ಯ ಸಮ್ಮೇಳನ ಧ್ವಜವನ್ನು ಚಂದ್ರಶೇಖರ ಪಾಟೀಲ ಅವರಿಗೆ ಹಸ್ತಾಂತರಿಸಿದರು.