ಮೈಸೂರು: ಸಲೂನ್ ಮತ್ತು ಸ್ಪಾ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಹಣಕ್ಕಾಗಿ ಯುವತಿ ಬೇಡಿಕೆ ಇಟ್ಟಿದ್ದು, ಹಣ ನೀಡದೆ ಇದ್ದಾಗ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಬಂಧಿತ ಮಾಲೀಕ ರಾಜೇಶ್ ಪತ್ನಿ ಸವಿತಾ ಹೇಳಿಕೆ ನೀಡಿದ್ದು, ಈ ಘಟನೆಗೆ ಒಡನಾಡಿ ಸಂಸ್ಥೆಯೇ ಕಾರಣ ಎಂದು ಆರೋಪಿಸಿದ್ದಾಳೆ.
ಶನಿವಾರ ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ರಾಜೇಶ್ ಪತ್ನಿ ಸವಿತಾ, ಇಡೀ ಪ್ರಕರಣದಲ್ಲಿ ಆಕೆಯನ್ನು ನೊಂದವಳು ಎಂದು ಬಿಂಬಿಸಲಾಗುತ್ತಿದೆ. ಆದರೆ ಘಟನೆಯಲ್ಲಿ ನೊಂದಿದ್ದು ನಾನು, ನನ್ನ ಮಗು. ನನ್ನ ಗಂಡ ರಾಜೇಶ್ ಕಷ್ಟಪಟ್ಟು ಈ ಸಲೂನ್ ತೆರೆದಿದ್ದಾರೆ. ಇಲ್ಲಿ ವ್ಯಾಪಾರ ಇಲ್ಲದೆ ಎರಡು ತಿಂಗಳಿನಿಂದ ಬಾಡಿಗೆಯನ್ನೇ ಕಟ್ಟಿಲ್ಲ. ವಾಸ ಮಾಡಲು ಮನೆ ಇಲ್ಲದೆ ನಾನು ನನ್ನ ಮಗು ಸಲೂನಲ್ಲೇ ಜೀವನ ಮಾಡುತ್ತಿದ್ದೀವಿ ಎಂದಿದ್ದಾರೆ.
ಈ ಸಲೂನ್ ತೆರೆದು ಮೂರು ತಿಂಗಳಾಗಿದೆ. ಮೂರು ತಿಂಗಳಿನಿಂದ ನಾನು ಊರಿಗೆ ಹೋಗಿಲ್ಲ. ಅಂದ ಮೇಲೆ ನನ್ನ ಗಂಡ ಆಕೆಯ ಮೇಲೆ ಅತ್ಯಾಚಾರ ಮಾಡಲು ಹೇಗೆ ಸಾಧ್ಯ? ನಮ್ಮ ಸಲೂನ್ ಸುತ್ತಮುತ್ತ ಸಿಸಿ ಕ್ಯಾಮಾರ ಇದೆ. ಯಾರೇ ಬಂದರೂ ಇಲ್ಲಿ ರೇಕಾರ್ಡ್ ಆಗಿರುತ್ತಿದೆ. ನಟರಾದ ಮಂಡ್ಯರಮೇಶ್, ಸಾಧುಕೋಕಿಲ ಇಲ್ಲಿಗೆ ಬಂದೇ ಇಲ್ಲ ಎಂದು ಮಾಲೀಕ ರಾಜೇಶ್ ಪತ್ನಿ ತಿಳಿಸಿದ್ದಾರೆ.
ನಮ್ಮಲ್ಲಿ ಕಟಿಂಗ್, ಶೇವಿಂಗ್, ಫೇಶ್ವಾಶ್ ಬಿಟ್ಟು ಬೇರೆನೂ ಮಾಡುವುದಿಲ್ಲ. ಮೊನ್ನೆ ದಾಳಿ ಮಾಡಿದ ಪೊಲೀಸರಿಗೆ ಏನು ಸಿಕ್ತು ಅಂತ ಬಹಿರಂಗ ಪಡಿಸಲಿ. ಆಕೆ ನಮ್ಮ ಸಲೂನ್ ನಲ್ಲಿ ಕೇವಲ 15 ದಿನ ಮಾತ್ರ ಕೆಲಸ ಮಾಡಿರೋದು. ಆ ನಂತರ 20 ದಿನ ರಜೆ ಹಾಕಿ ಮಂಗಳವಾರ ಬಂದಳು. ಬುಧವಾರವೇ ನಮ್ಮ ಸಲೂನ್ ಮೇಲೆ ದಾಳಿ ಆಗಿದೆ. ಇಡೀ ಘಟನೆಗೆ ಒಡನಾಡಿ ಸಂಸ್ಥೆಯೇ ಕಾರಣ. ಆ ಯುವತಿ ಒಡನಾಡಿ ಸಂಸ್ಥೆಯೊಂದಿಗೆ ಸೇರಿಕೊಂಡು ಷಡ್ಯಂತ್ರ ಮಾಡಿದ್ದಾಳೆ. ನನ್ನ ಗಂಡನ ನ್ಯಾಯಕ್ಕಾಗಿ ನಾನು ಹೋರಾಟ ಮಾಡ್ತಿನಿ. ಘಟನೆಯಿಂದ ನನ್ನ ಕುಟುಂಬ ಮಾನ ಮರ್ಯಾದೆ ಹೋಗಿದೆ ಎಂದು ಸಲೂನ್ ಮಾಲೀಕ ರಾಜೇಶ್ ಪತ್ನಿ ಸವಿತಾ ಅಳಲು ತೋಡಿಕೊಂಡಿದ್ದಾರೆ.
ಆ ಯುವತಿ ಹೇಳಿದ ನಟರಲ್ಲಿ ಮಂಡ್ಯ ರಮೇಶ್ ಉದ್ಘಾಟನೆಗೆ ಬಂದಿದ್ದರು. ಅದು ಬಿಟ್ಟು ಇನ್ಯಾರು ಇಲ್ಲಿಗೆ ಬಂದೇ ಇಲ್ಲ. ಈ ಘಟನೆಯಿಂದ ನಮ್ಮ ಕಟ್ಟಡದ ಮೇಲೂ ಕೆಟ್ಟ ಅಭಿಪ್ರಾಯ ಬಂದಂತಾಗಿದೆ. ಎರಡು ದಿನಗಳಿಂದ ನಾವು ಸಹ ನೋವಿನಲ್ಲಿ ಕಾಲ ಕಳೆದಿದ್ದೇವೆ. ಕಟ್ಟಡದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕಟ್ಟಡ ಮಾಲೀಕ ಸ್ವಾಮಿ ಹೇಳಿದ್ದಾರೆ.