ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯಿಂದ ಕಂಗೆಟ್ಟಿರುವಂತಹ ರಾಷ್ಟ್ರದ್ರೋಹಿಗಳು ಅವರ ವಿರುದ್ಧ ಅಲೆ ಎಬ್ಬಿಸಲು ಕೈಜೋಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೊಸ ಬಾಂಬ್ ಸಿಡಿಸಿದ್ದಾರೆ.
ಇಡೀ ವಿಶ್ವ ಈ ಮೋದಿಯವರ ನಾಯಕತ್ವವನ್ನು, ಭಾರತದ ಮಹತ್ವವನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದೆ. ಆದರೆ ಭಾರತದಲ್ಲಿ ಏನಾಗುತ್ತಿದೆ? ಇಡೀ ದೇಶದಲ್ಲಿ ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳು ಕೈಜೋಡಿಸುತ್ತಿದ್ದಾರೆ ಎಂದು ಅನಂತಕುಮಾರ್ ಹೆಗಡೆ ಟ್ವೀಟ್ ಮಾಡಿದ್ದಾರೆ.
ತನ್ನ ಟ್ವೀಟ್ ಮೂಲಕವಾಗಿ ಅವರು ಪ್ರತಿಪಕ್ಷಗಳು, ಪ್ರಗತಿಪರರು ಮತ್ತು ಬುದ್ದಿಜೀವಿಗಳು ವಿರುದ್ಧ ಹರಿಹಾಯ್ದಿದ್ದಾರೆ.
`ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿಯಿಂದಾಗಿ ಕಳ್ಳ ವ್ಯವಹಾರಗಳಿಗೆ, ಕಪ್ಪು ಹಣ ಚಲಾವಣೆಗೆ ಧಕ್ಕೆ ಬಂದುದರಿಂದ ಎಲ್ಲ ಕಳ್ಳರು ಒಟ್ಟಾಗಿ ಮೋದಿ ವಿರೋಧಕ್ಕೆ ಸಂಘಟಿತರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಪರಸ್ಪರ ಮುಖ ನೋಡಿಕೊಳ್ಳದಿದ್ದವರು ಇಂದು ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಆಪ್ತರಾಗಿ ಬಿಟ್ಟಿದ್ದಾರೆ’ ಎಂದು ಅನಂತಕುಮಾರ್ ಟ್ವೀಟ್ ಮಾಡಿದ್ದಾರೆ.