News Kannada
Sunday, October 02 2022

ಮೈಸೂರು

ಮದ್ದೂರಲ್ಲಿ ಕಬ್ಬು ಬಿಟ್ಟು ಅಡಿಕೆ ಬೆಳೆದ ಕೃಷಿಕ! - 1 min read

Photo Credit :

ಮದ್ದೂರಲ್ಲಿ ಕಬ್ಬು ಬಿಟ್ಟು ಅಡಿಕೆ ಬೆಳೆದ ಕೃಷಿಕ!

ಮಂಡ್ಯ: ಕಬ್ಬು ಮತ್ತು ಭತ್ತವನ್ನಷ್ಟೆ ಬೆಳೆಯುತ್ತಿದ್ದ ಮಂಡ್ಯದ ರೈತ ಇತ್ತೀಚೆಗೆ ನೀರಿನ ಅಭಾವದಿಂದಾಗಿ ಯಾವುದೇ ಬೆಳೆಯನ್ನು ಬೆಳೆಯಲಾರದ ಸ್ಥಿತಿಗೆ ಬಂದು ತಲುಪಿದ್ದಾನೆ. ಮತ್ತೊಂದೆಡೆ ಲಕ್ಷಾಂತರ ರೂ. ಬಂಡವಾಳ ಸುರಿದು ಕಬ್ಬನ್ನು ಬೆಳೆದರೂ ಅದಕ್ಕೆ ತಕ್ಕ ಬೆಲೆ ಸಿಗದೆ ಸಾಲಗಾರನಾಗಿ ಬದುಕಬೇಕಾದ ಕಠಿಣ ಪರಿಸ್ಥಿತಿಗೂ ಒಳಗಾಗಿದ್ದಾನೆ.

ಆದರೂ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡ ಎಂಬ ಮಾತಿನಂತೆ ಕಷ್ಟನೋ ಸುಖನೋ.. ಬೆಲೆ ಇರಲಿ, ಇಲ್ಲದಿರಲಿ ಅದನ್ನೇ ಬೆಳೆಯುವ ಅನಿವಾರ್ಯತೆ ಎಲ್ಲೆಡೆ ಕಂಡು ಬರುತ್ತಿದೆ. ಇವತ್ತು ಮಂಡ್ಯಕ್ಕೊಂದು ಸುತ್ತು ಬಂದರೆ ರೈತರ ಹೆಚ್ಚಿನ ಜಮೀನು ಪಾಳು ಬಿದ್ದಿದೆ. ಕಾರಣ ಕೆಆರ್ ಎಸ್ ಜಲಾಶಯದಲ್ಲಿ ನೀರು ಇಲ್ಲದ ಕಾರಣ ಯಾವ ಬೆಳೆಯನ್ನು ಬೆಳೆದಿಲ್ಲ. ಕೃಷಿ ಮಾಡಿಕೊಂಡು ಸ್ವಾಭಿಮಾನದಿಂದ ಬಾಳುತ್ತಿದ್ದವರು ಇವತ್ತು ಸಣ್ಣಪುಟ್ಟ ಕೆಲಸ ಹುಡುಕಿಕೊಂಡು ಪಟ್ಟಣದತ್ತ ಮುಖ ಮಾಡಿದ್ದಾರೆ.

ಸಾಮಾನ್ಯವಾಗಿ ಬಯಲು ಸೀಮೆಯಲ್ಲಿ ಆಹಾರ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಈ ಆಹಾರ ಬೆಳೆಗಳಿಗೆ ನೀರಿನ ಅಗತ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಜಮೀನಿನಲ್ಲಿ ಬೋರ್ವೆಲ್ ಕೊರೆಯಿಸಿ ಕೃಷಿ ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ಅಂತರ್ಜಲ ಕುಸಿತವಾಗಿರುವುದರಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ.

ಇದೆಲ್ಲದರ ನಡುವೆ ಮಂಡ್ಯದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ ಎಂಬ ಆಲೋಚನೆ ಕಳೆದ ಹತ್ತು ವರ್ಷದ ಹಿಂದೆಯೇ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕೆರೆಮೇಗಲದೊಡ್ಡಿಯ ನಿವಾಸಿ ವರದಣ್ಣ ಗೊತ್ತಾಗಿತ್ತೋ ಏನೋ? ಅವತ್ತಿನ ದಿನಕ್ಕೆ ಅವರಿಗೆ ನೀರು, ದರ, ಜತೆಗೆ ಸಕ್ಕರೆ ಕಾರ್ಖಾನೆಗೆ ಎಡತಾಕಿ ಕಬ್ಬು ಬೆಳೆಯುವುದು ಸಾಕು ಎಂಬ ಸ್ಥಿತಿಗೆ ಬಂದು ಬಿಟ್ಟಿದ್ದರು. ಮಲೆನಾಡಿನತ್ತ ಒಂದು ಸುತ್ತು ಹೋಗಿ ಬಂದವರಿಗೆ ಅಲ್ಲಿ ಅಡಿಕೆ, ತೆಂಗು ತೋಟವನ್ನು ನೋಡಿದಾಗ ತಾನು ಅದನ್ನು ಬೆಳೆದರೆ ಹೇಗೆ ಎಂಬ ಆಲೋಚನೆ ಬಂದಿತ್ತು.

ಆ ವೇಳೆಗೆ ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಬಹಳಷ್ಟು ಹೆಸರು ಮಾಡಿತ್ತು. ಅದನ್ನು ಓದಿಕೊಂಡ ಅವರಿಗೆ ಬಯಲು ಸೀಮೆಯಲ್ಲಿ ಅಡಿಕೆ ಸುಲಭವಾಗಿ ಬೆಳೆಯಲು ಸಾಧ್ಯನಾ ಎಂಬ ಮತ್ತೊಂದು ಪ್ರಶ್ನೆಯೂ ಕಾಡಿತ್ತು. ಆದರೆ ಅವರು ಧೈರ್ಯಗೆಡಲಿಲ್ಲ. ಒಂದು ಕೈ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಬಂದು ಬಿಟ್ಟರು.

ಹೀಗಾಗಿ ಅಡಿಕೆ ಕೃಷಿ ಬಗ್ಗೆ ಅರಿಯಲು ಶಿವಮೊಗ್ಗ, ಸಾಗರ, ತುಮಕೂರು ಕಡೆಗೆ ಪ್ರಯಾಣ ಬೆಳೆಸಿದರು. ಅಲ್ಲಿನ ಕೃಷಿಕರನ್ನು ಭೇಟಿ ಮಾಡಿ ಅವರು ಹೇಗೆ ಕೃಷಿ ಮಾಡಿದ್ದಾರೆ ಎಂಬುದನ್ನು ಅರಿತುಕೊಂಡರು. ಗಿಡ ನೆಡುವುದು, ಹನಿನೀರಾವರಿ ಮೊದಲಾದವುಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಮರಳಿ ಬಂದು ತಮ್ಮ ಒಡೆತನದ ಹನ್ನೊಂದು ಎಕರೆ ಗದ್ದೆಯಲ್ಲಿ ಐದೂವರೆ ಎಕರೆಯಲ್ಲಿ ಅಡಿಕೆ, ಇನ್ನೂ ಐದೂವರೆ ಎಕರೆಯಲ್ಲಿ ತೆಂಗನ್ನು ಬೆಳೆಯಲು ಮುಂದಾದರು.

ಗಿಡ ನೆಟ್ಟು ಅವುಗಳಿಗೆ ಹನಿನೀರಾವರಿ ಅಳವಡಿಸಿ ಕಾಪಾಡಿಕೊಂಡರು. ಗಿಡಗಳು ಹುಲುಸಾಗಿ ಬೆಳೆದವು. ಈಗ ಎಲ್ಲರೂ ಅವರ ತೋಟದತ್ತ ದೃಷ್ಠಿ ಬೀರುವಂತಾಗಿದೆ. ಪಾಳೇಕರ್ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಅವರು ಅಡಿಕೆ, ತೆಂಗು ಗರಿಗಳು ಸೇರಿದಂತೆ ಇನ್ನಿತರ ಅದರ ಉತ್ಪನ್ನಗಳನ್ನೇ ಸಂಗ್ರಹಿಸಿ ಅದರ ಮೇಲೆ ಮಣ್ಣು ಹಾಕಿ ಮುಚ್ಚುವ ಮೂಲಕ ಅದನ್ನು ಕೊಳೆಯಿಸಿ ಗೊಬ್ಬರವನ್ನಾಗಿ ಮಾಡುತ್ತಾರಲ್ಲದೆ, ಇದರಿಂದ ತೋಟದ ತೇವ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ.

See also  ಮೃಗಾಯಲಕ್ಕೆ ವಾರದ ರಜೆ ಇಲ್ಲ

ಇನ್ನು ಸೆಗಣಿ, ಗಂಜಲ, ಬೆಲ್ಲ, ಕಡಲೆಹಿಟ್ಟು, ತೋಟದ ಮಣ್ಣು ಮೊದಲಾದವುಗಳನ್ನು ಬಳಸಿ ಮಾಡಿದ ಜೀವಾಮೃತವನ್ನು ನೀಡುತ್ತಾರೆ. ಒಟ್ಟಾರೆ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ವರದಣ್ಣ ಅವರು ಅಡಿಕೆ ಮತ್ತು ತೆಂಗಿನ ತೋಟದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅಡಿಕೆ ಫಸಲಿಗೆ ಬರಲಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ನಮ್ಮದು ಬಯಲು ಸೀಮೆ ಹಾಗಾಗಿ ಏನೂ ಬೆಳೆಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾ ಹಳೆಯ ಪಾರಂಪರಿಕ ಬೆಳೆಯನ್ನೇ ಬೆಳೆದು ಕೈಸುಟ್ಟುಕೊಳ್ಳುತ್ತಿರುವ ರೈತರ ನಡುವೆ ವರದಣ್ಣನ ಧೈರ್ಯ ಮೆಚ್ಚುವಂತಹದ್ದೇ… ಅಡಿಕೆ ತೆಂಗು ತಕ್ಷಣಕ್ಕೆ ಬರುವ ಫಸಲಲ್ಲ. ಇದಕ್ಕೆ ಹಲವು ವರ್ಷಗಳ ಕಾಲ ಕಾಯುವ ತಾಳ್ಮೆಬೇಕು. ಅದು ಇದ್ದರೆ ಮುಂದೆ ಯಾವುದೇ ತೊಂದರೆಯಿಲ್ಲದೆ ಆದಾಯ ಪಡೆಯಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ವರದಣ್ಣ ಅವರನ್ನು ಮೊ. 8105943780ರಲ್ಲಿ ಸಂಪರ್ಕಿಸಬಹುದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು