ಮೈಸೂರು: ಯಾವುದೇ ಸ್ವಾಮೀಜಿಗಳು, ಯಾವುದೇ ರಾಜಕೀಯ ಪಕ್ಷಗಳ ಪರವಾಗಿ, ನಾಯಕರ ಪರವಾಗಿ ವಾದ ಮಾಡಬಾರದು ಎಂದು ಶಾಸಕ ಹೆಚ್.ವಿಶ್ವನಾಥ್ ಕಾಗಿನೆಲೆ ಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದರು.
ನಿನ್ನೆ ಕಾಗಿನೆಲೆ ಸ್ವಾಮಿಜೀ ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ವಿಚಾರದ ಬಗ್ಗೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ನ ಹುಣಸೂರು ಶಾಸಕ ಹೆಚ್.ವಿಶ್ವನಾಥ್, ಯಾವುದೇ ಸ್ವಾಮೀಜಿಗಳು, ಯಾವುದೇ ರಾಜಕೀಯ ಪಕ್ಷಗಳ ಪರವಾಗಿ, ನಾಯಕರ ಪರವಾಗಿ ವಾದ ಮಾಡಬಾರದು. ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಗಳು, ಅನಿಷ್ಟಗಳ ಬಗ್ಗೆ ವಾದ ಮಾಡಲಿ. ಸರ್ಕಾರಕ್ಕೆ ಎಚ್ಚರಿಕೆ ಕೊಡಲಿ. ಅದನ್ನು ಬಿಟ್ಟು ಈ ಜಾತಿ, ಆ ಜಾತಿ, ಈ ನಾಯಕನ ಪರ ಎಂದು ವಾದ ಮಾಡುವುದಲ್ಲ. ಮಾತೇ ಮಹಾದೇವಿ ಎಲ್ಲಾ ಕಾಂಗ್ರೆಸ್ ಗೆ ಓಟ್ ಹಾಕಿ ಅಂಥ ಹೇಳುತ್ತಾರೆ, ನಂಜವಾದೂತ ಸ್ವಾಮಿಗಳು ಕುಮಾರಸ್ವಾಮಿ ಏನಾದರೂ ಆದರೆ ಹುಷಾರ್ ಎಂದು ಹೇಳುತ್ತಾರೆ. ಕಾಗಿನೆಲೆ ಸ್ವಾಮಿಗಳು ಸಿದ್ದರಾಮಯ್ಯನವರಿಗೆ ಏನಾದರೂ ಆದರೆ ಹುಷಾರ್ ಅಂಥರೇ. ಯಾರು ಇವರೆಲ್ಲಾ? ಧರ್ಮಾಧಿಕಾರಿಗಳು, ಧರ್ಮ ಪ್ರಚಾರಕರು. ನಿಮ್ಮ ಮಾತುಗಳಿಂದ, ವಾದ ಮಂಡನೆಯಿಂದ ಜಾತಿ ಜಾತಿಗಳಲ್ಲಿ ಜಗಳ ಶುರುವಾಗುತ್ತದೆ. ಹಳ್ಳಿಗಳಲ್ಲಿ ಈ ವಿಷಯ ಪ್ರಚಾರಗೊಳ್ಳುತ್ತದೆ. ಧರ್ಮಾಧಿಕಾರಿಗಳು ಧರ್ಮದ ಪ್ರಸಾರ ಮಾಡಬೇಕೇ ಹೊರತು ಇದನ್ನಲ್ಲ. ಇದು ಒಳ್ಳೆಯದಲ್ಲ. ಜನತಂತ್ರ ವ್ಯವಸ್ಥೆಗೂ ಒಳ್ಳೆಯದಲ್ಲ ಎಂದು ಕಾಗಿನೆಲೆ ಹೇಳಿಕೆಯನ್ನು ಟೀಕಿಸಿದರು.
ನನ್ನ ಪರವಾಗಿ ಯಾರು ನಿಂತುಕೊಳ್ಳದಿದ್ದರೂ ಪರವಾಗಿಲ್ಲ. ಯಾರು ಇಲ್ಲದಿದ್ದರೂ ನಾನು ಚುನಾವಣೆಯಲ್ಲಿ ಗೆದಿದ್ದೇನೆ. ಈ ತರಹದ ಸ್ವಾಮಿಗಳು ನನ್ನ ಪರವಾಗಿ ನಿಲ್ಲಬೇಕಿಲ್ಲ. ಜನ ನನ್ನ ಪರವಾಗಿ ನಿಂತು ನನನ್ನು ಗೆಲ್ಲಿಸಿದ್ದಾರೆ. ಜನ ಸಿದ್ದರಾಮಯ್ಯನವರ ಪರವಾಗಿ ಇರಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತಿದ್ದು. ಇಂದು ಜಾತಿ ಹೆಸರನ್ನು ಹೇಳಿಕೊಂಡು ಬರುತ್ತಿರುವ ಸ್ವಾಮಿಜಿಗಳು ನನ್ನನ್ನು ಸಿದ್ದರಾಮಯ್ಯ ಹಳ್ಳಕ್ಕೆ ದೂಡುವಾಗ ಎಲ್ಲಿ ಹೋಗಿದ್ದರು ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದ ವಿಶ್ವನಾಥ್, ಈ ಸ್ವಾಮಿಯನ್ನು ಸ್ವಾಮಿ ಮಾಡಿದವರು ಯಾರು? ಸ್ವಾಮಿಗೆ ಮಠ ಕಟ್ಟಿಕೊಟ್ಟವರು ಯಾರು? ನಾವುಗಳು. ಹೀಗಾಗಿ ಇಬ್ಬಗೆ ನೀತಿಯನ್ನ ಬಿಡಬೇಕು. ಸಮಾಜದ ಕಲ್ಯಾಣದ ಪರವಾಗಿ ಸ್ವಾಮೀಜಿಗಳು ನಿಲ್ಲಬೇಕು. ಎಲ್ಲಾ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಾತುಗಳನ್ನಾಡಬೇಕು ಎಂದರು.