ಮೈಸೂರು: ಬಜೆಟ್ ನಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರು ಬ್ರಾಹ್ಮಣ ಸಮುದಾಯಕ್ಕೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿಸಿ 25ಕೋಟಿ ಅನುದಾನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ ಶಂಕರಾಚಾರ್ಯರ ಜಯಂತಿ ಆಚರಣೆಯನ್ನು ಘೋಷಣೆ ಮಾಡಿರುವುದನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಕಾರ್ಯಕರ್ತರು ಸ್ವಾಗತಿಸಿ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ವೇಳೆ ಬ್ರಾಹ್ಮಣ ಯುವವೇದಿಕೆಯ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ ಮಾತನಾಡಿ, ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ವಿಪ್ರನಿಧಿ ಸ್ಥಾಪನೆ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಬ್ರಾಹ್ಮಣ ಯುವ ವೇದಿಕೆ ರಾಜ್ಯಾದ್ಯಂತ ಹೋರಾಟ ಮತ್ತು ಸಮಾವೇಶವನ್ನು ಹಮ್ಮಿಕೊಂಡು ಸರ್ಕಾರದಗಮನ ಸೆಳೆಯಲಾಗಿತ್ತು.
ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಪ್ರತಿನಿತ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಿಕ್ಷಣ ಆರೋಗ್ಯ ಉದ್ಯೋಗದ ವಿಚಾರವಾಗಿ ತೊಂದರೆಯಾದರೆ ಸರ್ಕಾರದ ಯಾವುದೇ ಸೌಲಭ್ಯಗಳಾಗಲಿ ಮಾನ್ಯತೆಗಳಿರಲಿಲ್ಲ, ಶಿಕ್ಷಕರು ಅಡುಗೆಯವರು ಪುರೋಹಿತರು ಸೇರಿದಂತೆ ಬಡರೇಖೆಗಿಂತ ಕೆಳಗಿರುವ ವಿಪ್ರರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಆಂಧ್ರ ತೆಲಂಗಾಣದ ಮಾದರಿಯಲ್ಲಿ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರಅಥವಾ ವಿಪ್ರನಿಧಿ ಸ್ಥಾಪನೆ ಅವಶ್ಯಕವಿತ್ತು, ಕಳೆದ ಎರಡು ತಿಂಗಳ ಹಿಂದೆ ಹೆಚ್.ಡಿ ಕುಮಾರಸ್ವಾಮಿ ರವರು ಮೈಸೂರಿಗೆ ಆಗಮಿಸಿದ್ದಾಗ ವಿಪ್ರಸಂಪರ್ಕಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬ್ರಾಹ್ಮಣ ಯುವ ವೇದಿಕೆಯ ಮನವಿಯನ್ನು ಸ್ವೀಕರಿಸಿ ಇಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆಲಂಗಾಣದ ಮಾದರಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಸನಾತನ ವೈದಿಕ ಧರ್ಮದ ಉಳಿವಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಶಂಕರಾಚಾರ್ಯರ ಜಯಂತಿ ಆಚರಣೆ ಘೋಷಣೆ ಮಾಡಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ, ಕಾಂಗ್ರೆಸ್ ಮುಖಂಡರಾದ ವಿನಯ್ ಕಣಗಾಲ್,ಮುಳ್ಳೂರು ಸುರೇಶ್, ರಂಗನಾಥ್,ಹೆಚ್.ವಿ ಭಾಸ್ಕರ್, ಮೈಕ್ ಚಂದ್ರು, ರಾಘವೇಂದ್ರ ಪ್ರಸಾದ್, ಯುವಮುಖಂಡರಾದ ಅಜಯ್ ಶಾಸ್ತ್ರಿ, ಮನು ವೆಂಕಟರಾಮ್, ಜೆಡಿಎಸ್ ಮುಖಂಡರಾದಪ್ರಶಾಂತ್ ಪಚ್ಚು, ಶ್ರೀಕಾಂತ್ ಕಶ್ಯಪ್, ಪ್ರಕಾಶ್ ಪ್ರಿಯದರ್ಶನ್, ವೀಣಾ, ಸುಬ್ಬಯ್ಯ, ಹೆಡತಲೆ ಮಂಜು ಮುಂತಾದವರು ಭಾಗವಹಿಸಿದ್ದರು.