ಮೈಸೂರು: ಕೌಟುಂಬಿಕ ಕಲಹದ ಪ್ರಕರಣದಲ್ಲಿ ಅಣ್ಣನಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ತಮ್ಮ ಅತ್ತಿಗೆ ಮನೆಗೆ ನುಗ್ಗಿ ಅತ್ತಿಗೆಯ ತಂದೆಯನ್ನು ರಸ್ತೆಯಲ್ಲೇ ತೀವ್ರವಾಗಿ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವ್ನಪ್ಪಿರುವ ಘಟನೆ ನಗರದ ಉದಯಗಿರಿಯ ಶಾಂತಿ ನಗರದಲ್ಲಿ ನಡೆದಿದೆ.
ಹೀಗೆ ಅಣ್ಣನ ಹೆಂಡತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ತಮ್ಮ ಸೈಯದ್ ಇರ್ಫಾನ್. ಈತನ ಅಣ್ಣ ಸಯ್ಯದ್ ಸುಹೇಲ್ ಕಳೆದ 5 ವರ್ಷಗಳ ಹಿಂದೆ ನಫೀಜಾ ಎಂಬುವವರನ್ನು ವಿವಾಹವಾಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ದಂಪತಿ ವಿಚ್ಚೇದನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಗಂಡನಿಂದ ಪರಿಹಾರ ಕೊಡಿಸುವಂತೆ ಪತ್ನಿ ನಫೀಜಾ ನ್ಯಾಯಾಲಯದ ಮೊರೆ ಹೋಗಿದ್ದರು. ಪತ್ನಿಗೆ ಪರಿಹಾರ ನೀಡುವಂತೆ ನ್ಯಾಯಾಲಯವು ಸಯ್ಯದ್ ಸುಹೇಲ್ ಗೆ ಆದೇಶ ನೀಡಿತ್ತು. ಪರಿಹಾರದ ಹಣ 80 ಸಾವಿರ ಬಾಕಿ ಉಳಿಸಿಕೊಂಡಿದ್ದ ಕಾರಣ ಪತ್ನಿ ಪುನಃ ನ್ಯಾಯಾಲಯದ ಮೊರೆ ಹೋಗಿ ಹಣ ಕೊಡಿಸುವಂತೆ ಮನವಿ ಮಾಡಿದ್ದಳು.
ನಿನ್ನೆ ನ್ಯಾಯಾಯಲವು ಸೈಯದ್ ಸುಹೇಲ್ ಗೆ ನ್ಯಾಯಾಂಗ ಬಂಧನ ಶಿಕ್ಷೆ ಆದೇಶ ನೀಡಿತ್ತು. ಇದರಿಂದ ರೊಚ್ಚಿಗೆದ್ದ ಸೈಯದ್ ಸುಹೇಲ್ ಸಹೋದರ ಸೈಯದ್ ಇರ್ಫಾನ್ ಅತ್ತಿಗೆ ಮನೆಗೆ ನುಗ್ಗಿ ಮಚ್ಚಿನಿಂದ ನಫೀಜಾ ತಂದೆ ಅಸ್ಲಾಂ ಪಾಷಾ, ತಾಯಿ ದಿಲ್ಶಾನ್ ಬಾನು ಮತ್ತು ಅತ್ತಿಗೆ ನಫೀಜಾ ಮೇಲೆ ಹಲ್ಲೆ ನಡೆಸಿದ್ದಾನೆ. ಮಟನ್ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಇರ್ಫಾನ್ ಮಾಂಸ ಕತ್ತರಿಸುವ ಮಚ್ಚಿನಿಂದಲೇ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಗೊಳಗಾದ ಅಸ್ಲಾಂ ಪಾಷಾ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲೇ ರಸ್ತೆಯಲ್ಲೇ ಬಿದಿದ್ದು ಜನರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿರುವ ನಫೀಜಾ ಮತ್ತು ದಿಲ್ಶಾನ್ ಬಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಉದಯಗಿರಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಹಲ್ಲೆ ಮಾಡಿದ ಸೈಯದ್ ಇರ್ಫಾನ್ ನ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.