ಮೈಸೂರು: ಯುವತಿಯರೊಂದಿಗೆ ಮೋಜುಮಸ್ತಿ ಮಾಡುತ್ತಿದ್ದದನ್ನು ಪ್ರಶ್ನೆ ಮಾಡಿದ ಜಮೀನಿನ ಮಾಲೀಕನ ಮೇಲೆಯೇ ಹಲ್ಲೆ ಮಾಡಿದ್ದಲ್ಲದೆ ಗ್ರಾಮಕ್ಕೆ ನುಗ್ಗಿ ದಾಂಧಲೇ ಮಾಡಲು ಮುಂದಾದ ಯುವಕರಿಗೆ, ಗ್ರಾಮಸ್ಥರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಂಜನಗೂಡು ತಾಲೂಕಿನ ಹಂಡುವಿನಹಳ್ಳಿಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ದೇವಣ್ಣ ಎಂಬವರ ಜಮೀನಿನಲ್ಲಿ ಯುವತಿಯೊಂದಿಗೆ ದೇವರಸನಹಳ್ಳಿಯ ಇಬ್ಬರು ಯುವಕರು ಮೋಜಿನಲ್ಲಿ ತೊಡಗಿದ್ದರು. ಇದೇ ವೇಳೆ ಜಮೀನಿಗೆ ಬಂದ ದೇವಣ್ಣ ಯುವಕರನ್ನು ಪ್ರಶ್ನಿಸಿ ಜಮೀನಿನಿಂದ ಹೊರ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕರು ದೇವಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದೇ ಹಂಡುವಿನಹಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬಂದ 8 ಯುವಕರ ಗುಂಪು ದೇವಣ್ಣನ ಮಗ ನಾಗರಾಜು ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಯುವಕನನ್ನು ವಶಕ್ಕೆ ಪಡೆಯಲು ಯತ್ನಿಸಿದ ವೇಳೆ ಆರು ಮಂದಿ ಪರಾರಿಯಾಗಿದ್ದು, ಚಿಕ್ಕಣ್ಣ ಮತ್ತು ಯೋಗೇಶ್ ಸಿಕ್ಕಿಬಿದಿದ್ದಾರೆ.
ಈ ಇಬ್ಬರಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಗ್ರಾಮದ ಮಾರಿ ಗುಡಿ ದೇವಸ್ಥಾನದಲ್ಲಿ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಯುವಕರಿಂದ ಹಲ್ಲೆಗೊಳಗಾದ ನಾಗರಾಜು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.