ತಿ.ನರಸೀಪುರ: ಕೆಟ್ಟು ನಿಂತಿದ್ದಂತಹ ತಹಶೀಲ್ದಾರರ ಹಳೆ ಟಾಟಾ ಸುಮೋದಲ್ಲಿದ್ದ ಪೆಟ್ರೋಲನ್ನು ಕದಿಯುವ ವೇಳೆ ಬೀಡಿ ಕಿಡಿ ಬಿದ್ದು ಬೆಂಕಿ ಹತ್ತಿ ಉರಿದ ಪರಿಣಾಮ ಟಾಟಾ ಸುಮೋ ಸೇರಿದಂತೆ ಹತ್ತಿರದಲ್ಲಿ ನಿಲ್ಲಿಸಿದ್ದ ಬೈಕ್ ಹಾಗೂ ವಿಶೇಷಚೇತನರ ಬೈಕ್ಗಳು ಬೆಂಕಿಗಾಹುತಿಯಾದ ಘಟನೆ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದ ಬಳಿ ನಡೆದಿದೆ.
ತಾ.ಪಂ ಕೊಳಾಯಿ ಪಂಪ್ ಸಹಾಯಕ ಜಾಫರ್ ಎಂಬಾತನೇ ಕೃತ್ಯ ಎಸಗಿದವ. ಈತ ಪೆಟ್ರೋಲ್ ಕದಿಯಲು ಮುಂದಾಗಿದ್ದು ಬೀಡಿ ಸೇದುತ್ತಾ ಟಾಟಾ ಸುಮೋದಲ್ಲಿದ್ದ ಪೆಟ್ರೋಲ್ ತೆಗೆದಿದ್ದು ಈ ವೇಳೆ ಬೆಂಕಿ ತಗುಲಿ ಘಟನೆ ನಡೆದಿದೆ. ಹೊಗೆ ದಟ್ಟವಾಗಿ ಹರಡುತ್ತಿರುವುದನ್ನು ನೋಡಿದ ಜನ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ತಹಶೀಲ್ದಾರರು ಸಂಚಾರಕ್ಕೆ ಬಳಸುತ್ತಿದ್ದ ಟಾಟಾ ಸುಮೋ ತೀರಾ ಹಳೆಯದಾಗಿದ್ದರಿಂದ ಕೆಲವು ವರ್ಷಗಳಿಂದ ಮಿನಿ ವಿಧಾನಸೌಧದ ಕಟ್ಟಡದಲ್ಲಿ ನಿಲ್ಲಿಸಲಾಗಿತ್ತು. ಸುಮೋ ಪಕ್ಕದಲ್ಲಿ ಕಚೇರಿ ನೌಕರರಿಬ್ಬರು ಬಳಸುವ ದ್ವಿಚಕ್ರಗಳನ್ನು ನಿಲ್ಲಿಸಲಾಗಿತ್ತು. ಪಕ್ಕದ ತಾ.ಪಂ ಕಚೇರಿಯಲ್ಲಿ ಕೊಳಾಯಿ ಪಂಪ್ ಸಹಾಯಕ ಜಾಫರ್ ಬೀಡಿ ಸೇದುತ್ತಾ ಸುಮೋದಲ್ಲಿ ಪೆಟ್ರೋಲ್ ಕದಿಯುತ್ತಿದ್ದಾಗ ಕಿಡಿ ತಾಗಿದ್ದರಿಂದ ಬೆಂಕಿ ಹೊತ್ತಿಕೊಂಡು ಘಟನೆ ನಡೆದಿದ್ದು, ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎನ್. ಆನಂದ್ ಅವರು ಆರೋಪಿ ಜಾಫರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.