ಹುಣಸೂರು: ಇತ್ತೀಚೆಗಿನ ದಿನಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅರಣ್ಯದಿಂದ ನೇರವಾಗಿ ನಾಡಿನತ್ತ ಬಂದು ಸಾಕು ಪ್ರಾಣಿಗಳ ಮೇಲೆ ಎಲ್ಲೆಂದರಲ್ಲಿ ದಾಳಿ ಮಾಡಿ ಕೊಂದು ತಿನ್ನುತ್ತಿವೆ. ಇದರಿಂದಾಗಿ ರೈತರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಬಹಳಷ್ಟು ರೈತರು ಕೃಷಿಯೊಂದಿಗೆ ಉಪ ಕಸುಬಾಗಿ ಮೇಕೆ, ಕುರಿಗಳನ್ನು ಸಾಕುತ್ತಾರೆ. ಆದರೆ ಮೇಲಿಂದ ಮೇಲೆ ದಾಳಿ ಮಾಡುವ ಚಿರತೆಗಳು ಅವುಗಳನ್ನು ಕೊಂದು ತಿನ್ನುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕುರಿ, ಮೇಕೆಗಳನ್ನು ತಮ್ಮ ಜಮೀನಿನಲ್ಲಿ ಬಿಟ್ಟು ಮೇಯಿಸುವಾಗ ಪೊದೆಗಳಲ್ಲಿ ಅವಿತು ಕುಳಿತುಕೊಳ್ಳುವ ಚಿರತೆಗಳು ಸಮಯ ಸಾಧಿಸಿ ಕುರಿಗಳ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೆ, ರಾತ್ರಿ ಕೊಟ್ಟಿಗೆಗೆ ನುಗ್ಗಿ ಕೊಂದು ತಿನ್ನುತ್ತಿವೆ. ಇದರಿಂದ ಯಾವಾಗ ಚಿರತೆಗಳು ದಾಳಿ ಮಾಡಿಬಿಡುತ್ತವೆಯೋ ಎಂಬ ಭಯವೂ ಇಲ್ಲಿನವರನ್ನು ಕಾಡುತ್ತಿದೆ.
ನಾಗರಹೊಳೆ ಅರಣ್ಯದಿಂದ ಬರುವ ಬರುವ ಚಿರತೆಗಳು ಊರುಗಳಲ್ಲಿ ಅಡ್ಡಾಡುತ್ತಾ ಪೊದೆಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಸಮಯ ಸಾಧಿಸಿ ದಾಳಿ ಮಾಡುತ್ತಿವೆ. ಇದರಿಂದ ಭಯಗೊಂಡಿರುವ ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ. ಈ ನಡುವೆ ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಊರುಕುಪ್ಪೆ ಬಡಾವಣೆಯಲ್ಲಿ ರಮೇಶ್ ಎಂಬುವವರ ಜಮೀನಿನಲ್ಲಿದ್ದ ಶಿರೇನಹಳ್ಳಿ ಗ್ರಾಮದ ಉಜಿನಿಗೌಡ ಎಂಬುವರ ಕುರಿ ಮಂದೆ ಮೇಲೆ ದಾಳಿ ಮಾಡಿದ ಚಿರತೆ ಎರಡು ಮೇಕೆ ಹಾಗೂ ಒಂದು ಕುರಿಯನ್ನು ಸಾಯಿಸಿದೆ.
ಬೆಳಗ್ಗಿನ ಜಾವದಲ್ಲಿ ಮಂದೆ ಮೇಲೆ ದಾಳಿ ಮಾಡಿದ ಚಿರತೆ ಮೇಕೆಯನ್ನು ಹಿಡಿದು ತಿಂದಿದೆ. ಈ ವೇಳೆ ಮೇಕೆ, ಕುರಿಗಳು ಅರಚಿದ ಶಬ್ದ ಕೇಳಿದ ಜನ ಓಡಿ ಬಂದು ನೋಡಿದಾಗ ಚಿರತೆ ಮೇಕೆಯನ್ನು ಹಿಡಿದಿರುವುದು ಕಾಣಿಸಿದೆ. ಕೂಡಲೇ ಶಬ್ದ ಮಾಡಿ ಓಡಿಸಿದ್ದಾರೆ. ಅಷ್ಟರಲ್ಲಿ 2 ಮೇಕೆ, ಒಂದು ಕುರಿ ಸಾವನ್ನಪ್ಪಿತ್ತು. ಮತ್ತೊಂದು ಮೇಕೆಗೆ ಗಾಯವಾಗಿದೆ.
ಚಿರತೆ ದಾಳಿಯಿಂದ ಮಾಲಿಕನಿಗೆ ಸುಮಾರು 10 ಸಾವಿರದಷ್ಟು ನಷ್ಟವಾಗಿದೆ. ಈ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಚಿರತೆಯ ಹಾವಳಿ ಹೆಚ್ಚಾಗಿದ್ದು, ಆಗಾಗ್ಗೆ ಕುರಿ, ಮೇಕೆಗಳ ಮೇಲೆ ಮಾತ್ರವಲ್ಲದೆ, ಜಾನುವಾರುಗಳ ಮೇಲೆಯೂ ದಾಳಿ ಮಾಡುತ್ತಿವೆ. ಸಾಕುನಾಯಿಗಳನ್ನು ಹಿಡಿದು ತಿನ್ನುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.