ಹಾಸನ: ಕುಟುಂಬದ ಮಾನ ಮರ್ಯಾದೆಗೆ ಅಂಜಿ ಮಗಳೊಂದಿಗೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಕಲಗೂಡು ತಾಲೂಕಿನ ದೊಡ್ಡನಾಯಕ ಕೊಪ್ಪಲಿನಲ್ಲಿ ನಡೆದಿದೆ.
ದೊಡ್ಡನಾಯಕನಕೊಪ್ಪಲು ಗ್ರಾಮದ ನಿವಾಸಿ ಕೃಷ್ಣ(55), ಪತ್ನಿ ನಂಜಮ್ಮ(50) ಪುತ್ರಿ ಭೂಮಿಕಾ(22) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಗ್ರಾಮದ ನಾಗರಾಜು ಹಾಗೂ ಅಡಿಕೆ ಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಎಂಬಿಬ್ಬರ ನಡುವೆ ಜಗಳವಾಗಿ ನಾಗರಾಜು ಕೊಲೆಯಾಗಿದ್ದನು. ಈ ವಿಚಾರಕ್ಕೆ ಸಂಬಂಧಿದಂತೆ ಕೊಲೆಯಲ್ಲಿ ಕೃಷ್ಣ ಅವರ ಪುತ್ರ ಲೋಕೇಶನ ಕೈವಾಡವಿದೆ ಎಂದು ಮೃತನ ಮನೆಯವರು ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.
ಜತೆಗೆ ಆರೋಪ ಸಾಬೀತಾದರೆ ನಿಮ್ಮ ಮನೆಯವರನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದರು. ಬೆದರಿಕೆ ಮತ್ತು ಕೊಲೆ ಪ್ರಕರಣದಲ್ಲಿ ತಮ್ಮ ಮಗನನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದರಿಂದ ಕುಟುಂಬದ ಮಾನವೇ ಹೋಯಿತೆಂದು ಊಟದಲ್ಲಿ ವಿಷ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.