ಭಾರತೀನಗರ: ಕಬ್ಬು ಸಾಗಿಸುತ್ತಿದ್ದ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಗಾಯಗೊಂಡ ಹಿನ್ನೆಲೆಯಲ್ಲಿ ರೈತರು ಪ್ರತಿಭಟಿಸಿ, ಅದೇ ಮಾರ್ಗವಾಗಿ ಬಂದ ಚಾಮರಾಜನಗರ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿಗೆ ಘೇರಾವ್ ಹಾಕಿದ ಘಟನೆ ಇಲ್ಲಿನ ಮಂಡ್ಯ ವೃತ್ತದಲ್ಲಿ ನಡೆದಿದೆ.
ಶೆಟ್ಟಹಳ್ಳಿ ಗ್ರಾಮದ ಕೃಷ್ಣೇಗೌಡ ಅವರು ಚಾಂಷುಗರ್ ಕಾರ್ಖಾನೆಗೆ ಕಬ್ಬು ಸಾಗಿಸಲು ಮಂಡ್ಯ ರಸ್ತೆಯಿಂದ ಮದ್ದೂರು ಮಳವಳ್ಳಿ ರಸ್ತೆಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಬೆಂಗಳೂರಿನಿಂದ ಬರುತ್ತಿದ್ದ ಖಾಸಗಿ ಬಸ್ ಎತ್ತಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಎತ್ತು ಕುಸಿದು ಬಿದ್ದಿತು.
ಈ ಸಂದರ್ಭದಲ್ಲಿ ರೊಚ್ಚಿಗೆದ್ದ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೆ, ವೃತ್ತದಲ್ಲಿರುವ ರಸ್ತೆ ಉಬ್ಬು ತೆರೆವುಗೊಳಿಸಬೇಕೆಂದು ಆಗ್ರಹಿಸಿದರು. ಇದರಿಂದ ಬೆಂಗಳೂರು-ಕೊಳ್ಳೇಗಾಲ ಮಾರ್ಗವಾಗಿ ತೆರಳುವ ವಾಹನಗಳು ಸಾಲು-ಸಾಲು ನಿಂತು ರಸ್ತೆ ಸಂಚಾರ ಸ್ಥಗಿತಗೊಂಡಿತು.
ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಹೋಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರು ಪ್ರತಿಭಟನಾನಿರತ ರೈತರ ಸಮಸ್ಯೆ ಆಲಿಸದೇ ಕಾರಿನಲ್ಲಿ ಮುಂದೆ ಹೋಗಲು ಯತ್ನಿಸಿದಾಗ ಆಕ್ರೋಶಗೊಂಡ ರೈತರು ಸಚಿವರಿಗೆ ಘೇರಾವ್ ಮಾಡಿದರು.
ಬಳಿಕ ಕಾರಿನಿಂದ ಇಳಿದು ಬಂದ ಸಚಿವರು, ರೈತರ ಅಹವಾಲು ಸ್ವೀಕರಿಸಿ ಗಾಯಗೊಂಡ ಎತ್ತಿನ ಮಾಲೀಕ ಕೃಷ್ಣೇಗೌಡ ಅವರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 5 ಸಾವಿರ ರೂ. ಪರಿಹಾರ ನೀಡಿದರು. ಅಲ್ಲದೇ ರಸ್ತೆಯಲ್ಲಿದ್ದ ಉಬ್ಬನ್ನು ತೆರವುಗೊಳಿಸುವಂತೆ ಪೊಲೀಸರಿಗೆ ಮತ್ತು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿ ತಮ್ಮ ಜಿಲ್ಲೆ ಕಡೆಗೆ ಹೊರಟು ಹೋದರು.