News Kannada
Friday, September 30 2022

ಮೈಸೂರು

ನವರಾತ್ರಿಯಲ್ಲಿ ವಿದ್ಯುತ್ ಬೆಳಕಲ್ಲಿ ಜಗಮಗಿಸಲಿದೆ ಮೈಸೂರು - 1 min read

Photo Credit :

ನವರಾತ್ರಿಯಲ್ಲಿ ವಿದ್ಯುತ್ ಬೆಳಕಲ್ಲಿ ಜಗಮಗಿಸಲಿದೆ ಮೈಸೂರು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಧ್ಯುಕ್ತ ಚಾಲನೆ ನೀಡಿದ ಬೆನ್ನಲ್ಲೇ ನವರಾತ್ರಿಯ ಕಗ್ಗತ್ತಲನ್ನಾಚೆ ನೂಕಿ ವಿದ್ಯುತ್ ಬೆಳಕಿನಲ್ಲಿ ಮಿಂದೇಳುತ್ತಾ ಇಂದ್ರನ ಅಮರಾವತಿಯೇ ಧರೆಗೆ ಬಂದಂತೆ ಮೈಸೂರು ನಗರ ಗೋಚರವಾಗಲಿದೆ.

ಇಡೀ ನಗರವೇ ದಸರಾ ಸಂಭ್ರಮದಲ್ಲಿದ್ದು ಸುಣ್ಣಬಣ್ಣಗಳಿಂದ ವಿದ್ಯುತ್ ಅಲಂಕಾರಗಳಿಂದ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ನಗರದ ಎಲ್ಲ ರಸ್ತೆಗಳು, ಪಾರಂಪರಿಕ ಕಟ್ಟಡಗಳು, ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಪ್ರಮುಖ ರಸ್ತೆಗಳು, ಝಗಮಗಿಸುವ ದೀಪದ ಬೆಳಕಲ್ಲಿ ಸ್ವರ್ಗದ ಹಾದಿಯೇನೋ ಎಂಬಂತೆ ಗೋಚರಿಸಿದರೆ ಬೆಳಕಲ್ಲೇ ಮಿಂದೇಳುತ್ತಿವೆ. ಅರಮನೆ ಮತ್ತು ಪಾರಂಪರಿಕ ಕಟ್ಟಡಗಳು, ಮಹಲುಗಳು, ಗುರುಮನೆಗಳು. ಇನ್ನೂ ಹಸಿರು ದೀಪಾಲಂಕಾರ ಹೊತ್ತ ಉದ್ಯಾನವನಗಳು ಒಂದೆಡೆಯಾದರೆ, ಕಪ್ಪುಬಣ್ಣದ ಭಿತ್ತಿಪತ್ರಗಳ ಮೇಲೆ ಬಣ್ಣಬಣ್ಣದ ಬೆಳಕಿನ ಚಿತ್ತಾರವೇ ಚೆಲ್ಲಾಡಿದಂತೆ ಭಾಸವಾಗುವ ವಿದ್ಯುತ್ ಅಲಂಕಾರ. ಮೈಸೂರಿಗೆ ಕಳೆಕಟ್ಟಿದೆ.

ಜಂಬೂ ಸವಾರಿ ಸಾಗುವ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಹೈವೇ ವೃತ್ತ ಮತ್ತು ಬನ್ನಿಮಂಟಪದ ರಸ್ತೆಗಳು ಸುರಸುಂದರ ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿವೆ. ಪ್ರಮುಖ ಕಟ್ಟಡಗಳಾದ ಅಂಬಾವಿಲಾಸ ಅರಮನೆ, ಲಲಿತ ಮಹಲ್, ಅರಮನೆ ದೇವರಾಜು ಅರಸು ರಸ್ತೆ, ರೈಲ್ವೆ ಸ್ಟೇಷನ್ ವೃತ್ತ, ಪಾರಂಪರಿಕ ಕಟ್ಟಡಗಳಾದ ಪುರಭವನ, ನಗರ ಪಾಲಿಕೆ ಕಟ್ಟಡ, ಮೂಡಾ, ನ್ಯಾಯಾಲಯ ಕಟ್ಟಡ, ಜಿಲ್ಲಾಧಿಕಾರಿ ಕಚೇರಿ, ಮೈಸೂರು ವಿವಿ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳಂತು ವಿದ್ಯುತ್ ಬೆಳಕಿನ ರಂಗವಲ್ಲಿಯಿಟ್ಟು ನಳನಳಿಸುತ್ತಿವೆ.

ಇನ್ನು ಚಾಮುಂಡಿಬೆಟ್ಟದಿಂದ ನಿಂತು ಮೈಸೂರನ್ನೊಮ್ಮೆ ನೋಡಿದರೆ ಅಲ್ಲಿಂದ ಕಾಣುವ ಆ ಸುಂದರ ದೃಶ್ಯ ಮನಪಟಲದಲ್ಲಿ ಸುಂದರ ದೃಶ್ಯವನ್ನು ಅಚ್ಚೊತ್ತಿಬಿಡುತ್ತದೆ. ಮೈಸೂರಿನ ಸುಂದರ ರಾತ್ರಿಯಲ್ಲಿ ದೀಪಗಳ ಬೆಳಕಿನಲ್ಲಿ ಗರಿಬಿಚ್ಚಿ ಹಾರಾಡಬೇಕೆಂದರೆ ಸ್ಕೂಟರ್ ಬೈಕ್ ಇಲ್ಲವೆ ಟಾಂಗಾ ಗಾಡಿ ನಗರಕ್ಕೊಂದು ಸುತ್ತು ಹೊಡೆಯಬೇಕು.

ಮೈಸೂರು ದಸರಾ ದೀಪಾಲಂಕಾರ ಸಮಿತಿಯ ಉಪ ವಿಶೇಷಾಧಿಕಾರಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ. ಗೋಪಾಲ ಕೃಷ್ಣ ಅವರು ನೀಡಿದ ಮಾಹಿತಿ ಪ್ರಕಾರ ಈ ಬಾರಿ 26 ರಸ್ತೆಗಳ 52 ಕಿ.ಮೀ ರಸ್ತೆಗೆ ವಿಶೇಷ ಆರ್‍ಜಿಬಿ ಎಲ್‍ಇಡಿ ಬಲ್ಬ್ ಬಳಸಿ ವಿದ್ಯುತ್ ಅಲಂಕಾರ ಮಾಡಲಾಗಿದೆಯಂತೆ. ಬೇಲೂರಿನ ದರ್ಪಣ ಸುಂದರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ.ಸರ್.ಎಂ.ವಿಶ್ವೇಶ್ವರಯ್ಯ, ಬುದ್ದ, ಬಸವ ಹೀಗೆ ಹಲವು ಮಹನೀಯರ 13ಕ್ಕೂ ಹೆಚ್ಚು ಪ್ರತಿ ಕೃತಿಗಳನ್ನು ನಗರದಾದ್ಯಂತ ವಿದ್ಯುದೀಪಗಳಿಂದ ಸೃಷ್ಠಿ ಮಾಡಲಾಗಿದೆಯಂತೆ.

ಬಹು ಬಣ್ಣಗಳನ್ನು ಪ್ರದರ್ಶಿಸುವ ಆರ್‍ಜಿಬಿ(ರೆಡ್, ಗ್ರಿನ್, ಬ್ಲೂ) ಎಲ್‍ಇಡಿಗಳನ್ನು ಬಳಸಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿರುವುದು ಈ ಬಾರಿ ವಿಶೇಷವಾಗಿದ್ದು, ಡಿ.ದೇವರಾಜ ಅರಸ್ ರಸ್ತೆ, ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದ ಎದುರಿನ ರಸ್ತೆಯನ್ನು ಎಲ್‍ಇಡಿ ಬಲ್ಬುಗಳಿಂದ ಅಲಂಕರಿಸಲಾಗಿದ್ದು, ಇದಕ್ಕೆ 2.98 ಕೋಟಿ ರೂ. ವೆಚ್ಚವಾಗಿರುವುದಾಗಿ ಹೇಳಿದ್ದಾರೆ.

ಚಾಮುಂಡಿ ಬೆಟ್ಟದ ರಸ್ತೆ, ಮೈಸೂರು-ಹುಣಸೂರು ರಸ್ತೆ, ಓಪನ್ ಸ್ಟ್ರೀಟ್ ಫೆಸ್ಟ್‍ಗಾಗಿ ಕೃಷ್ಣರಾಜ ಬುಲೇವಾರ್ಡ್ ರಸ್ತೆಗಳಲ್ಲಿ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡಿರುವುದು ಈ ಬಾರಿಯ ದಸರಾದ ವಿಶೇಷತೆಯಾಗಿದೆ.

See also  ಯಶಸ್ವಿ ಹಾಗೂ ಶಿಸ್ತುಬದ್ಧ ದಸರಾ ಆಚರಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚನೆ

ಇದಲ್ಲದೆ ವಿದ್ಯುತ್ ದೀಪಾಲಂಕಾರದ ವೇಳೆ ಪ್ರಾಣಿ ಪಕ್ಷಿಗಳಿಗೆ ರಾತ್ರಿ ವೇಳೆ ತೊಂದರೆಯಾಗದಂತೆ ಮತ್ತು ಮರಗಳಿಗೆ ಕಬ್ಬಿಣ ಮೊಳೆಗಳನ್ನು ಹೊಡೆಯುವುದನ್ನು ತಪ್ಪಿಸಿ ಪರಸರ ಪ್ರೇಮ ಮೆರೆದಿದ್ದು ಮತ್ತೊಂದು ವಿಶೇಷತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು